ದಕ್ಷಿಣ ಆಫ್ರಿಕಾ ವಿರುದ್ಧದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು

ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಡುವೆ ನಡೆಯುತ್ತಿರುವ ಟಿ 20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಅನುಭವಿಸಿದೆ. ಕಟಕ್​ನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಬರೋಬ್ಬರಿ 101 ರನ್​ಗಳ ಅಂತರದಲ್ಲಿ ಸೋಲಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 51 ರನ್​ಗಳ ಅಂತರದಲ್ಲಿ ಸೋಲನ್ನು ಕಂಡಿದೆ.

ಕಳೆದ ಬಾರಿಯ ಪಂದ್ಯದಂತೆಯೇ ಈ ಬಾರಿಯೂ ಟಾಪ್​ ಆರ್ಡರ್​ ಬ್ಯಾಟರ್​ಗಳ ವೈಫಲ್ಯವೇ ಈ ಸೋಲಿಗೆ ಕಾರಣವಾಗಿದೆ. ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್​ ಹಾಗೂ ಉಪನಾಯಕ ಶುಭಮನ್​ಗಿಲ್​ ಅವರ ಹೀನಾಯ ಪ್ರದರ್ಶನದಿಂದ ಟೀಂ ಇಂಡಿಯಾ ಸೋಲನ್ನು ಅನುಭವಿಸಿದೆ.ಕಳೆದೊಂದು ವರ್ಷದಿಂದ ಇಬ್ಬರೂ ಆಟಗಾರರು ಟಿ 20 ಪಂದ್ಯಾಟದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಲೇ ಬರುತ್ತಿದ್ದಾರೆ .
ನ್ಯೂಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 213 ರನ್​ಗಳನ್ನು ಗಳಿಸಿತು. ಕ್ವಿಂಟನ್​ ಡಿ ಕಾಕ್​ 46 ಎಸೆತಗಳಿಗೆ 90 ರನ್​ಗಳನ್ನು ಸಿಡಿಸುವ ಮೂಲಕ ತಂಡಕ್ಕೆ ಆಸರೆ ಎನಿಸಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 162 ರನ್​ಗಳಿಗೆ ತನ್ನ ಸಂಪೂರ್ಣ ವಿಕೆಟ್​ ಕಳೆದುಕೊಂಡಿತು. ಈ ಮೂಲಕ 51 ರನ್​ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವಿನ ಟಿ20 ಸರಣಿ ಸದ್ಯಕ್ಕೆ 1-1 ಅಂತರದಲ್ಲಿ ಸಮಬಲಗೊಂಡಿದೆ.

ಇದನ್ನೂ ಓದಿ: ಕ್ರಿಕೆಟ್ ನೇರಪ್ರಸಾರದಿಂದ ಏಕಾಏಕಿ ಹಿಂದೆ ಸರಿದ ಜಿಯೋ ಹಾಟ್‌ಸ್ಟಾ‌ರ್ : ಐಸಿಸಿಗೆ ಶುರು ಹೊಸ ತಲೆನೋವು

ಮುಂದಿನ ಪಂದ್ಯವು ಭಾನುವಾರದಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ವಿಭಾಗಗಳ ಕಳಪೆ ಪ್ರದರ್ಶನವೇ ಮುಖ್ಯ ಕಾರಣವಾಗಿದೆ. ವರುಣ್​ ಚಕ್ರವರ್ತಿ ಹೊರತುಪಡಿಸಿದರೆ ಮಿಕ್ಕೆಲ್ಲ ಬೌಲರ್​ಗಳು ಅತ್ಯಂತ ಹೀನಾಯ ಪ್ರದರ್ಶನ ತೋರಿದರು. ಭರವಸೆಯ ಬೌಲರ್​ಗಳು ಎನಿಸಿದ ಜಸ್ಪ್ರೀತ್​ ಬೂಮ್ರಾ ಮತ್ತು ಆರ್ಶ್​ದೀಪ್​ ಸಿಂಗ್​ ಕೂಡ 99 ರನ್​ಗಳನ್ನು ಬಿಟ್ಟುಕೊಡುವ ಮೂಲಕ ಕಳಪೆ ಬೌಲಿಂಗ್​ ಪ್ರದರ್ಶಿಸಿದರು. 16 ವೈಡ್​ಗಳನ್ನು ಬಿಟ್ಟುಕೊಡುವ ಮೂಲಕ ಬೌಲರ್​ಗಳು ನಿರ್ಲಕ್ಷ್ಯ ತೋರಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಮುಂದಿನ ಪಂದ್ಯಾಟದಲ್ಲಿ ಟೀಂ ಇಂಡಿಯಾ ಯಾವ ರೀತಿ ಕಮ್​ಬ್ಯಾಕ್​ ಮಾಡುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories