ಚಿಕ್ಕ ಬೀಜವಾದರೂ ಲಾಭ ದೊಡ್ಡದು: ತೂಕ ಇಳಿಕೆಗೆ ಬೆಸ್ಟ್‌ ಕುಂಬಳ ಬೀಜ

Pumpkin Seeds Benefits: ಹಿಂದಿನ ಕಾಲದ ಮಕ್ಕಳಿಗೆ ಕುಂಬಳ ಬೀಜ ಚಿರಪರಿಚಿತ. ಸಂಜೆ ಶಾಲೆ ಮುಗಿಸಿ ಮನೆಗೆ ಬಂದರೆ ಮನೆಯ ಹಿರಿಯರು ಒಣಗಿದ ಕುಂಬಳ ಬೀಜವನ್ನು ಹುರಿದು ಕೊಡುತ್ತಿದ್ದರು.

ಮಕ್ಕಳು ಒಂದೆಡೆ ಕುಳಿತು ಅದರ ಸಿಪ್ಪಿ ಸುಲಿದು ತಿನ್ನುತ್ತಿದ್ದರು. ಚಿಪ್ಸ್‌, ಬಿಸ್ಕತ್ತು, ಚಾಕಲೇಟ್‌ ಸಂಸ್ಕೃತಿ ಪ್ರಾರಂಭವಾಗುತ್ತಿದ್ದಂತೆ ಹಳೆಯ ಕಾಲದ ಸಂಜೆಯ ಸ್ನಾಕ್ಸ್‌ ಕಣ್ಮರೆಯಾಗಿದೆ.

ಆರೋಗ್ಯ ಕಾಪಾಡುವ ಆಹಾರಕ್ಕಿಂತ ಜಿಹ್ವಾ ಚಪಲವನ್ನು ತೀರಿಸುವ ಆಹಾರಗಳೇ ಹೆಚ್ಚು ರುಚಿ ಎನಿಸುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಈ ಅಭ್ಯಾಸಗಳೇ ಸಮಸ್ಯೆಗೆ ಕಾರಣವಾಗಿದೆ.

ಶ್ರಮವಿಲ್ಲದ ಇಂದಿನ ದಿನಗಳಲ್ಲಿ ತೂಕ ಏರಿಕೆ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಿಂದ ಅನೇಕ ಅಪಾಯಗಳು ಎದುರಾಗುತ್ತಿವೆ. ತೂಕ ಇಳಿಕೆಗೆ ಹರ ಸಾಹಸ ಪಟ್ಟರೂ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟದ ಕೆಲಸ ಎನ್ನುವಂತಾಗಿದೆ.

ಶಾಲೆ, ಆಫೀಸ್‌ ಮುಗಿಸಿ ಬರುವವರಿಗೆ ಏನಾದರೂ ತಿನ್ನಲಿಕ್ಕೆ ಬೇಕೆನಿಸುವುದು ಸಹಜ. ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ಹಾಗೂ ಆರೋಗ್ಯದ ಕಾಳಜಿವಹಿಸುವವರಿಗೆ ಅನಾರೋಗ್ಯಕರ ಆಹಾರ ಸೇವನೆಗೆ ಮನಸ್ಸು ಒಪ್ಪುವುದಿಲ್ಲ.

ಅಂತಹ ಸಂದರ್ಭದಲ್ಲಿ ಪೌಷ್ಟಿಕಾಂಶಗಳಿಂದ ಕೂಡಿದ ಒಣ ಬೀಜಗಳು, ಒಣ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅವು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬುವುದರ ಜೊತೆಗೆ ತೂಕ ಇಳಿಕೆಗೂ ಬೆಸ್ಟ್‌ ಆಗಿದೆ.

ಒಣ ಬೀಜಗಳಲ್ಲಿ ಒಂದಾದ ಕುಂಬಳ ಬೀಜ ಪೌಷ್ಟಿಕಾಂಶಗಳ ಆಗರವಾಗಿದೆ. ಅದನ್ನು ಸೇವಿಸುವುದರಿಂದ ತೂಕ ಇಳಿಕೆಯ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು.

ಕಂಬಳ ಬೀಜದ ಪ್ರಯೋಜನಗಳು

ಈಗಿನ ಜೀವನ ಶೈಲಿಗೆ ಕುಂಬಳಕಾಯಿ ಬೀಜ ಒಂದು ಸ್ಮಾರ್ಟ್‌ ಆಯ್ಕೆ ಎನ್ನಬಹುದು. ಏಕೆಂದರೆ ಇದು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಇದನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನೂ ಓದಿ: ಮೊಟ್ಟೆ ತಿಂದರೆ ಕ್ಯಾನ್ಸರ್? ಆತಂಕಕ್ಕೆ ತೆರೆ ಎಳೆದ ಆಹಾರ ಸುರಕ್ಷತಾ ಪ್ರಾಧಿಕಾರ!

ಕುಂಬಳ ಬೀಜವನ್ನು ಯಾವ ರೀತಿ ಸೇವಿಸಬಹುದು?

ಕುಂಬಳ ಬೀಜವನ್ನು ಅನೇಕ ರೀತಿಯಲ್ಲಿ ಸೇವಿಸಬಹುದು.

  • ಗ್ರೀಕ್‌ ಮೊಸರಿನ ಜೊತೆಗೆ ಕುಂಬಳ ಬೀಜ: ಒಂದು ಕಪ್‌ ಗ್ರೀಕ್‌ ಮೊಸರಿಗೆ ಒಂದು ಚಮಚ ಕುಂಬಳ ಬೀಜ ಬೆರೆಸಿ ಬೆಳಗಿನ ಉಪಹಾರದಲ್ಲಿ ಸೇವಿಸಿ. ಗ್ರೀಕ್ ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ ಮತ್ತು ಕುಂಬಳಕಾಯಿ ಬೀಜಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
  • ಓಟ್ಸ್‌ ಮತ್ತು ಕುಂಬಳ ಬೀಜದ ಸ್ಮೂಥಿ: ಒಂದು ಕಪ್‌ ಹಾಲು, ಅರ್ಧ ಕಪ್‌ ಓಟ್ಸಿಗೆ ಒಂದು ಚಮಚ ಕುಂಬಳ ಬೀಜ ಮತ್ತು ಒಂದು ಬಾಳೆಹಣ್ಣು ಸೇರಿಸಿ ಸ್ಮೂಥಿ ತಯಾರಿಸಿ. ಅದನ್ನು ವ್ಯಾಯಾಮದ ನಂತರ ಅಥವಾ ಬೆಳಗಿನ ಉಪಹಾರದಲ್ಲಿ ಸೇವಿಸಿ.
  • ಸಂಜೆಯ ಸ್ನಾಕ್ಸ್‌ಗೆ ಬಾದಾಮಿ ಮತ್ತು ಕುಂಬಳ ಬೀಜ: ಸಂಜೆಯ ಸ್ನಾಕ್ಸ್‌ಗೆ 10 ಬಾದಾಮಿ ಮತ್ತು ಒಂದು ಚಮಚ ಕುಂಬಳ ಬೀಜವನ್ನು ಸೇರಿಸಿ ತಿನ್ನಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories