ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ರದ್ದು : ಅನುಮತಿ ನಿರಾಕರಿಸಿದ ರಾಜಧಾನಿ ಪೊಲೀಸರು
ಆರ್ಸಿಬಿ ವಿಜಯೋತ್ಸವದ ದುರಂತದ ಶಾಪ ಅಂಟಿಸಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾಕೋ ಹೊಸ ಪಂದ್ಯವನ್ನಾಡಿಸುವ ಭಾಗ್ಯವೇ ದೊರಕುತ್ತಿಲ್ಲ. ಇದೀಗ ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಪಂದ್ಯಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ.
ನಾಳೆ ಪಂದ್ಯ ಆಯೋಜಿಸುವ ಸಂಬಂಧ ನಿನ್ನೆ ಬೆಂಗಳೂರು ಆಯುಕ್ತ ಸೀಮಂತ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಬಳಿಕ ಈ ತಂಡ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಇದೀಗ ಬೆಂಗಳೂರು ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದಾರೆ.
ನಾಳೆ ನಡೆಯಲಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ. ಕಳೆದ ಬಾರಿ ಕೂಡ ಸ್ಟೇಡಿಯಂ ಗೇಟ್ ಹೊರಗೆ ದುರಂತ ಸಂಭವಿಸಿತ್ತು. ಈ ಬಾರಿಯೂ ಇದೇ ಮಾದರಿಯ ಅವಘಡ ಸಂಭವಿಸುವ ಆತಂಕ ಇರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಠಿಯಿಂದ ಬೆಂಗಳೂರು ಪೊಲೀಸರು ನಾಳಿನ ಪಂದ್ಯಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್ 2026ಕ್ಕೆ ಟೀಮ್ ಇಂಡಿಯಾ ಪ್ರಕಟ: ಶುಭಮನ್ ಗಿಲ್ ತಂಡದಿಂದ ಔಟ್! ಇಶಾನ್ ಕಿಶನ್ ಕಮ್‌ಬ್ಯಾಕ್
ನಾಳೆ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ತಂಡದ ಪರವಾಗಿ ಆಡಲಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾದ ಬಳಿಕ ರಾಜ್ಯ ಸರ್ಕಾರದ ಬಳಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ವೆಂಕಟೇಶ್ ಪ್ರಸಾದ್ ಅನುಮತಿ ಕೇಳಿದ್ದರು.



