ಕೊಡಲಿಯಿಂದ ಗಂಡನನ್ನು 26 ಬಾರಿ ಕಡಿದು ಕೊಂದ ಹೆಂಡತಿ! ಅಡಗಿಕೊಂಡು ಬಚಾವಾದ ಮಗು
Wife Kills Husbend: ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೌಟುಂಬಿಕ ಕಲಹವು ಭೀಕರ ಅಂತ್ಯ ಕಂಡಿದ್ದು, ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದ ನಂತರ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಡಲಿಯಿಂದ ಬರೊಬ್ಬರಿ 26 ಬಾರಿ ಕಡಿದು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಠೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದ ಪತಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿ ವೀರಾಂಗನಾ (35) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಲಿಯಿಂದ ಸತತ 26 ಬಾರಿ ದಾಳಿ ನಡೆಸಿ ತನ್ನ ಪತಿ ರವಿಶಂಕರ್ ಸವಿತಾ ಅಲಿಯಾಸ್ ಪಪ್ಪು (45) ಅವರನ್ನು ಈಕೆ ಹತ್ಯೆ ಮಾಡಿದ್ದಾಳೆ.
ಘಟನೆಯ ವಿವರ:
ಪೊಲೀಸರ ಮಾಹಿತಿಯ ಪ್ರಕಾರ, ದಂಪತಿಗಳ ನಡುವೆ ಮದ್ಯಪಾನದ ವಿಷಯವಾಗಿ ದೀರ್ಘಕಾಲದಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆಯ ದಿನದಂದು ಪತಿ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಪತ್ನಿ, ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಪತಿಯ ಮೇಲೆ ಸತತವಾಗಿ ದಾಳಿ ಮಾಡಿದ್ದಾಳೆ. ಕೊಡಲಿಯ ಏಟಿನ ತೀವ್ರತೆಗೆ ಪತಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಈ ಭೀಕರ ಕೃತ್ಯ ನಡೆಯುವಾಗ ದಂಪತಿಯ ನಾಲ್ಕು ವರ್ಷದ ಪುತ್ರ ಮನೆಯಲ್ಲೇ ಇದ್ದನು. ತಾಯಿ ಕೊಡಲಿಯಿಂದ ತಂದೆಯನ್ನು ಕೊಲ್ಲುವುದನ್ನು ಕಂಡು ಹೆದರಿದ ಮಗು, ಒಂದು ಕೋಣೆಯೊಳಗೆ ಅಡಗಿ ಕುಳಿತು ಪ್ರಾಣ ಉಳಿಸಿಕೊಂಡಿದೆ. ಪೊಲೀಸರು ಬಂದಾಗ ಮಗು ತೀವ್ರ ಆಘಾತದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ ನಂತರ ವೀರಾಂಗನಾ ಸ್ವತಃ ಪೊಲೀಸರಿಗೆ ಕರೆ ಮಾಡಿ, “ನನ್ನ ಪತಿಗೆ ಅಪಘಾತವಾಗಿದೆ” ಎಂದು ಸುಳ್ಳು ಮಾಹಿತಿ ನೀಡಿದ್ದಳು. ಪೊಲೀಸರು ಸ್ಥಳಕ್ಕೆ ಬಂದಾಗ ಆಕೆ ಮನೆಯಲ್ಲಿ ಹರಡಿದ್ದ ರಕ್ತವನ್ನು ತೊಳೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುತ್ತಿದ್ದಳು.
ಇದನ್ನೂ ಓದಿ: ರಾಜೀವ್ ಗಾಂಧಿ ವಸತಿ ಯೋಜನೆ: ಅತಿ ಕಡಿಮೆ ಹಣಕ್ಕೆ ಸ್ವಂತ ಮನೆಗಾಗಿ ಈಗಲೇ ಅರ್ಜಿ ಹಾಕಿ
ಪೊಲೀಸ್ ತನಿಖೆ:
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತನ ದೇಹದ ಮೇಲೆ 26 ಆಳವಾದ ಗಾಯಗಳಿರುವುದು ದೃಢಪಟ್ಟಿದೆ, ಇದು ದಾಳಿಯ ಭೀಕರತೆಯನ್ನು ಎತ್ತಿ ತೋರಿಸುತ್ತದೆ. ಆರೋಪಿ ಮಹಿಳೆಯನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದು, ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಥಳೀಯರ ಪ್ರಕಾರ, ಈ ದಂಪತಿಗಳ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಮದ್ಯದ ವ್ಯಸನವೇ ಈ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಕೊನೆಗೆ ಇದೇ ವ್ಯಸನವು ಒಂದು ಜೀವವನ್ನು ಬಲಿಪಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



