ಟಿ20 ವಿಶ್ವಕಪ್ 2026: ಸೂರ್ಯನ ಅಬ್ಬರ, ಸಿರಾಜ್ ಮಿಂಚು; ಅಮೆರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

T20 World Cup 2026, IND vs USA Highlights: ಮುಂಬೈ: ತವರು ನೆಲದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಅಮೆರಿಕಾ (USA) ವಿರುದ್ಧ 29 ರನ್‌ಗಳ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ನಾಯಕ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿ ಭಾರತದ ಗೆಲುವಿಗೆ ಹಾದಿ ಮಾಡಿಕೊಟ್ಟಿತು.

ತತ್ತರಿಸಿದ ಅಗ್ರ ಕ್ರಮಾಂಕ; ಆಸರೆಯಾದ ನಾಯಕ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಮೆರಿಕಾದ ವೇಗಿಗಳು ಆರಂಭದಲ್ಲೇ ಶಾಕ್ ನೀಡಿದರು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ‘ಗೋಲ್ಡನ್ ಡಕ್’ (0) ಗೆ ಔಟಾದರೆ, ಇಶಾನ್ ಕಿಶನ್ (20) ಮತ್ತು ತಿಲಕ್ ವರ್ಮಾ (25) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಹಾಗೂ ರಿಂಕು ಸಿಂಗ್ ವೈಫಲ್ಯ ಅನುಭವಿಸಿದಾಗ ಭಾರತ 77 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆ: ಪ್ರತಿ ತಿಂಗಳು 1,500 ರೂಪಾಯಿ ಪಡೆಯಲು ಹೀಗೆ ಮಾಡಿ

ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ಸೂರ್ಯಕುಮಾರ್ ಯಾದವ್, ಕೇವಲ 49 ಎಸೆತಗಳಲ್ಲಿ ಅಜೇಯ 84 ರನ್ (10 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಕ್ಷರ್ ಪಟೇಲ್ (14) ಉಪಯುಕ್ತ ಸಾಥ್ ನೀಡಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಮೆರಿಕಾ ಪರ ಶಾಡ್ಲಿ ವ್ಯಾನ್ ಶಾಲ್ಕ್ವಿಕ್ 4 ವಿಕೆಟ್ ಪಡೆದು ಮಿಂಚಿದರು.

ಅಮೆರಿಕಾ ಹೋರಾಟಕ್ಕೆ ಬ್ರೇಕ್ ಹಾಕಿದ ಸಿರಾಜ್

162 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಅಮೆರಿಕಾ ತಂಡಕ್ಕೆ ಭಾರತದ ವೇಗಿಗಳು ಆರಂಭದಲ್ಲೇ ಕಡಿವಾಣ ಹಾಕಿದರು. ಅನಾರೋಗ್ಯದಿಂದ ಬುಮ್ರಾ ಅಲಭ್ಯರಾಗಿದ್ದರೂ, ಅವರ ಬದಲಿಗೆ ಆಡಿದ ಮೊಹಮ್ಮದ್ ಸಿರಾಜ್ 29 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಅರ್ಶದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿ ಅಮೆರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಅಮೆರಿಕಾ ಪರ ಸಂಜಯ್ ಕೃಷ್ಣಮೂರ್ತಿ (37) ಮತ್ತು ಶುಭಂ ರಂಜಾನೆ (37) ಗೆಲುವಿಗಾಗಿ ಹೋರಾಡಿದರೂ, ಭಾರತದ ಬಿಗಿ ಬೌಲಿಂಗ್ ಮುಂದೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಮೆರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories