ಮಲ್ಪೆ ಬೀಚ್ ಬಳಿ ಚಾಕು ಇರಿತ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಪ್ರೇಮ ಪ್ರಕರಣದ ರಾಜಿ ಪಂಚಾಯ್ತಿ ವೇಳೆಯಲ್ಲಿ ಮಲ್ಪೆಯ ಬಿಜೆಪಿ ಮುಖಂಡ ಮಂಜು ಕೊಳ ಅವರಿಗೆ ಚಾಕುವಿನಿಂದ ಇರಿಯಲಾಗಿತ್ತು

ಉಡುಪಿ: ಮಲ್ಪೆ ಬೀಚ್ ಸಮೀಪ ಚಾಕು ಇರಿತ ನಡೆಸಿ ಸ್ಥಳೀಯ ಮೀನುಗಾರ ಮುಖಂಡ ಮಂಜು ಕೊಳ ( malpe manju kola) ಸೇರಿ ಹಲವರನ್ನು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಭಂಡಾರಿ (22), ಪ್ರಜ್ಞೇಶ್ (22), ಪುನಿತ್ ಪೂಜಾರಿ (24) ಹಾಗೂ ಅಭೀಜಿತ್ (20) ಬಂಧಿತರು.
ಮಾರ್ಚ್ 3ರಂದು ರಾತ್ರಿ 9.30ರ ಸುಮಾರಿಗೆ ಅಮೃತ್ ಭಂಡಾರಿ, ಪ್ರಜ್ಞೇಶ್, ಪುನಿತ್ ಪೂಜಾರಿ ಹಾಗೂ ಅಭಿಜಿತ್ ಎಂಬವರು ಅಪ್ರಾಪ್ತ ಬಾಲಕನೊಂದಿಗೆ ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಬಂದು, ಮಲ್ಪೆ ಬೀಚ್ ಸಮೀಪದ ಬ್ಲೂ ವೇವ್ಸ್ ಗೆಸ್ಟ್ ಹೌಸ್ ಬಳಿಯಲ್ಲಿ ಮರಳಿನಲ್ಲಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ (ಮಂಜು ಕೊಳ), ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಅಮೃತ್ ಭಂಡಾರಿಯ ತಂಗಿ ವಿಚಾರವಾಗಿ ತಗಾದೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡು, ಮಂಜು ಕೊಳ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ.
ಆರೋಪಿ ಪ್ರಜ್ಞೇಶ್ ತನ್ನ ಬಳಿಯಿದ್ದ ಚಾಕುವಿನಿಂದ ಮಂಜು ಕೊಳ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದು ಗಂಭೀರ ಗಾಯ ಮಾಡಿದ್ದಾನೆ. ಅಲ್ಲದೆ ವರುಣ್ ಹಾಗೂ ಲತೀಶ್ ಅವರಿಗೂ ಚಾಕುವಿನಿಂದ ಗಾಯಗೊಳಿಸಲಾಗಿದ್ದು, ತಡೆಯಲು ಬಂದ ಸಂತೋಷ್, ಧನುಷ್ ಸೇರಿದಂತೆ ಇತರರ ಮೇಲೂ ಕೈಯಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಲ್ಪೆಯಲ್ಲಿ ಕಿಡಿ ಹೊತ್ತಿಸಿದ ಲವ್ ಅಫೇರ್: ರಾಜಿ ಪಂಚಾಯ್ತಿ ವೇಳೆ ಮೀನುಗಾರ ಮುಖಂಡ ಮಂಜು ಕೊಳಗೆ ಇರಿತ
ತನಿಖೆ ಕೈಗೊಂಡ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು, ಅಪ್ರಾಪ್ತನನ್ನು ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಪ್ರೇಮ ಪ್ರಕರಣ : ಚಾಕು ಇರಿತ
ಪ್ರೇಮ ಪ್ರಕರಣದ ರಾಜಿ ಪಂಚಾಯ್ತಿ ವೇಳೆಯಲ್ಲಿ ಮಲ್ಪೆಯ ಬಿಜೆಪಿ ಮುಖಂಡ ಮಂಜು ಕೊಳ ಅವರಿಗೆ ಚಾಕುವಿನಿಂದ ಇರಿಯಲಾಗಿತ್ತು. ಕೂಡಲೇ ಮಂಜು ಕೊಳ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಜು ಕೊಳ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕಾರ್ಕಳ: ಗಂಡ-ಹೆಂಡತಿ ಜಗಳ ಬಿಡಿಸಿ ಬರುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್ ಗೋಕಳ್ಳರು
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ನೀಡಿದ ಮಾಹಿತಿಯನ್ವಯ, ಸದ್ಯ ಮಂಜು ಕೊಳ ಅಪಾಯದಿಂದ ಪಾರಾಗಿದ್ದಾರೆ. ಐವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಠಾಣೆಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.



