ಬೆಂಗಳೂರು-ಮಂಗಳೂರಿಗೆ ಇನ್ಮುಂದೆ ಕೇವಲ 5 ಗಂಟೆಗಳ ಪ್ರಯಾಣ: ಶೀಘ್ರದಲ್ಲೇ ವಂದೇ ಭಾರತ್ ಪ್ರಾಯೋಗಿಕ ಸಂಚಾರ!

ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಕೇವಲ 5 ಗಂಟೆಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ. ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ರೈಲ್ವೆ ಇಲಾಖೆ ಸಜ್ಜಾಗಿದ್ದು, ಪಶ್ಚಿಮ ಘಟ್ಟದ ಕಠಿಣ ಹಾಗೂ ಕಡಿದಾದ ಹಾದಿಯಲ್ಲಿ ಹಳಿಗಳ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಹೈಸ್ಪೀಡ್ ರೈಲು ಮಲೆನಾಡಿನ ಮಡಲಲ್ಲಿ ಓಡಾಡಲು ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ರೈಲ್ವೆ ಇಲಾಖೆ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವಿನ 55 ಕಿಲೋಮೀಟರ್ ಉದ್ದದ ಅತ್ಯಂತ ಕಠಿಣ ಘಾಟಿ ವಿಭಾಗದಲ್ಲಿ ವಿದ್ಯುದ್ದೀಕರಣ ಕಾಮಗಾರಿಯನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸುಮಾರು 93.55 ಕೋಟಿ ರೂಪಾಯಿ ವೆಚ್ಚದಲ್ಲಿ ಈ ದಟ್ಟ ಅರಣ್ಯ ಪ್ರದೇಶದ ಮಾರ್ಗವನ್ನು ನವೀಕರಿಸಲಾಗಿದ್ದು, ಪ್ರಸ್ತುತ ಈ ಹಳಿಯಲ್ಲಿ ಸರಕು ಸಾಗಣೆ ಹಾಗೂ ಪ್ಯಾಸೆಂಜರ್ ರೈಲುಗಳು ಚಲಿಸುತ್ತಿವೆ. ಇದರ ಬೆನ್ನಲ್ಲೇ ಈಗ ವಂದೇ ಭಾರತ್ ರೈಲನ್ನು ಪರಿಚಯಿಸಲು ಸಿದ್ಧತೆಗಳು ನಡೆದಿವೆ.

ಇದನ್ನೂ ಓದಿ :  ವಿಟ್ಲ-ಮಂಗಳೂರು ಬಸ್ ಕೊರತೆ.. ಸರ್ಕಾರಿ ಎಕ್ಸ್​ಪ್ರೆಸ್​ ಸಾರಿಗೆಗಾಗಿ ಹೆಚ್ಚಿದ ಆಗ್ರಹ!

ಪಶ್ಚಿಮ ಘಟ್ಟದ ಕಡಿದಾದ ರೈಲ್ವೆ ಮಾರ್ಗದಲ್ಲಿ ರೈಲುಗಳ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಯಿಂದ ವಿಶೇಷ ಸ್ವಯಂಚಾಲಿತ ತುರ್ತು ಬ್ರೇಕಿಂಗ್ (Automatic Emergency Braking – AEB) ತಂತ್ರಜ್ಞಾನವನ್ನು ಒಳಗೊಂಡ ರೇಕ್‌ಗಳನ್ನು ತರಿಸಲಾಗುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲುಗಳು ಗರಿಷ್ಠ 30 ಕಿ.ಮೀ ವೇಗದಲ್ಲಿ ಮಾತ್ರ ಚಲಿಸಬೇಕಾಗುತ್ತದೆ. ಒಂದು ವೇಳೆ ರೈಲು ನಿಗದಿತ ವೇಗಕ್ಕಿಂತ ಹೆಚ್ಕಾದರೆ, ಈ AEB ತಂತ್ರಜ್ಞಾನವು ಸ್ವಯಂಚಾಲಿತವಾಗಿ ಬ್ರೇಕ್ ಹಾಕಿ ವೇಗವನ್ನು ನಿಯಂತ್ರಿಸುತ್ತದೆ. ಮುಂದಿನ ವಾರದಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದ್ದು, ಆರ್‌.ಡಿ.ಎಸ್‌.ಒ (RDSO) ತಜ್ಞರ ತಂಡ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಿದೆ.

ಬೆಂಗಳೂರು ಮಂಗಳೂರು ನಡುವೆ ಸಂಚಾರ ನಡೆಸಲಿರುವ ವಂದೇ ಭಾರತ್‌ ರೈಲು ತುಮಕೂರು, ಅರಸೀಕೆರೆ, ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಸಂಚರಿಸಲಿದೆ. ಈ ಹೈಸ್ಪೀಡ್‌ ರೈಲು ಸಂಚಾರ ಆರಂಭಗೊಂಡ್ರೆ, ಕೇವಲ 5 ಗಂಟೆಗಳ ಅವಧಿಯಲ್ಲಿ ಈ ಎರಡೂ ನಗರವನ್ನು ಸಂಪರ್ಕಿಸಬಹುದಾಗಿದೆ. ಈ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಒಟ್ಟು 57 ಅದ್ಭುತ ಸುರಂಗ, 113 ಸುಂದರ ಸೇತುವೆಗಳು ಸಿಗಲಿದ್ದು, ರೈಲ್ವೆ ಪ್ರಯಾಣಿಕರಿಗೆ ಪಶ್ಚಿಮ ಘಟ್ಟದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ ಸಿಗಲಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories