ಬಿಎಂಟಿಸಿ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಮತ್ತೆ ಶಾಕ್! ಟಿಕೆಟ್ ದರ ಭಾರಿ ಏರಿಕೆಗೆ ಸಜ್ಜು

ಆರ್ಥಿಕ ಸಂಕಷ್ಟ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಕೋರಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ಬಳಸುವ ಲಕ್ಷಾಂತರ ಪ್ರಯಾಣಿಕರಿಗೆ ಮತ್ತೊಮ್ಮೆ ಬಸ್ ಪ್ರಯಾಣ ದುಬಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ ಡಬ್ಲ್ಯು ಕೆಆರ್ ಟಿಸಿ ಹಾಗೂ ಕೆಕೆಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ. ಈ ಕುರಿತು ಮುಖ್ಯಮಂತ್ರಿಗಳು ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಸಾಧ್ಯತೆ ಮತ್ತಷ್ಟು ಬಲಗೊಂಡಿದೆ.

ಸಾರಿಗೆ ನಿಗಮಗಳ ಪ್ರಕಾರ, ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಕಾರ್ಯಾಚರಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳಲ್ಲಿ ಇಂಧನ ವೆಚ್ಚದಲ್ಲಿ ಉಂಟಾದ ಹೆಚ್ಚಳದಿಂದ ಪ್ರತಿ ತಿಂಗಳು ಸುಮಾರು 40 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಎದುರಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಷಿಕ ನಷ್ಟವು 480 ಕೋಟಿ ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ನಿಗಮಗಳು ತಿಳಿಸಿವೆ.

ಇದೊಂದೇ ಅಲ್ಲದೆ, ಜುಲೈ ತಿಂಗಳಿಂದ ಸಾರಿಗೆ ನೌಕರರಿಗೆ ಪರಿಷ್ಕೃತ ವೇತನ ಜಾರಿಗೆ ಬರಬೇಕಿದೆ. ಶೇ 12.5ರಷ್ಟು ವೇತನ ಹೆಚ್ಚಳದ ಜೊತೆಗೆ ಇನ್ನೂ ಬಿಡುಗಡೆ ಆಗಬೇಕಿರುವ ನೂರಾರು ಕೋಟಿ ರೂಪಾಯಿ ವೇತನ ಬಾಕಿ ಹಣವೂ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಉಂಟುಮಾಡಿದೆ.

ಸರ್ಕಾರದ ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5 ಸಾವಿರ ಕೋಟಿ ರೂಪಾಯಿ ಬಾಕಿಯೂ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ನಿಗಮಗಳು ಸರ್ಕಾರದ ಗಮನಕ್ಕೆ ತಂದಿವೆ.

ಪ್ರಸ್ತಾವನೆಯ ಪ್ರಕಾರ, ಬಿಎಂಟಿಸಿ ಟಿಕೆಟ್ ದರದಲ್ಲಿ ಶೇ 44ರಷ್ಟು ಹಾಗೂ ಕೆಎಸ್ಆರ್ಟಿಸಿ ದರದಲ್ಲಿ ಶೇ 33ರಷ್ಟು ಹೆಚ್ಚಳಕ್ಕೆ ಅನುಮತಿ ಕೋರಲಾಗಿದೆ. ಆದರೆ ಕಳೆದ ವರ್ಷವೇ ದರ ಏರಿಕೆಯಾಗಿದ್ದ ಹಿನ್ನೆಲೆ ಮತ್ತೊಮ್ಮೆ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಸಾರ್ವಜನಿಕರಲ್ಲಿ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories