ಬೆಳ್ತಂಗಡಿ ಬಾಲಕ ಸುಮಂತ್ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು : ಯಾರಿರಬಹುದು ಆ ಕೊಲೆಗಾರ?
ಬೆಳ್ತಂಗಡಿಯ 15 ವರ್ಷದ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಕರ ಸಂಕ್ರಾಂತಿಯ ದಿನದಂದು ಮುಂಜಾನೆ ಧನು ಪೂಜೆಗೆ ತೆರಳಿದ್ದ ಬಾಲಕ ಬಳಿಕ ಪತ್ತೆಯಾಗಿದ್ದು ಶವವಾಗಿ.
ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿಯಾಗಿದ್ದ ಸುಮಂತ್ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸುಮಂತ್ ಸಾವು ಇದೀಗ ನಾನಾ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಆಗಿನ್ನೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಂತ್ನನ್ನು ಕೊಲೆ ಮಾಡುವಷ್ಟು ದ್ವೇಷ ಯಾರಿಗೆ ಇದ್ದಿರಬಹುದು?
ಇದೊಂದು ಪ್ರಾಣಿ ದಾಳಿ ಎಂದು ಊಹಿಸಲಾಯ್ತಾದರೂ ಸುಮಂತ್ ಶವ ಪತ್ತೆಯಾದ ಕೆರೆಯಲ್ಲಿಯೇ ಟಾರ್ಚ್ ಹಾಗೂ ಕತ್ತಿ ಕೂಡ ಪತ್ತೆಯಾಗಿರೋದ್ರಿಂದ ಸುಮಂತ್ ನಿಗೂಢ ಸಾವು ಖಂಡಿತವಾಗಿಯೂ ಪೂರ್ವನಿಯೋಜಿತ ಹತ್ಯೆ ಎಂಬುದನ್ನು ಬಲವಾಗಿ ಸಾಬೀತುಪಡಿಸುತ್ತಿದೆ.
ಇದು ಮಾತ್ರವಲ್ಲದೇ ಸುಮಂತ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಮರಣೋತ್ತರ ಪರೀಕ್ಷಾ ವರದಿ ಕೂಡ ಇದು ಕೊಲೆ ಎಂಬುದನ್ನೇ ತಿಳಿಸಿದೆ. ಹೀಗಾಗಿ ಪೊಲೀಸರು ಸದ್ಯ ಆರೋಪಿಗಳ ಪತ್ತೆಯಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಧನುರ್ಮಾಸದ ಪೂಜೆಗೆಂದು ಮುಂಜಾನೆ 5 ಗಂಟೆಗೆ ಕಳಿ ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ಬಾಲಕ ಸುಮಂತ್ ಇತ್ತ ದೇವಸ್ಥಾನಕ್ಕೂ ಹೋಗದೇ ಇತ್ತ ಮನೆಯನ್ನೂ ಸೇರದೇ ಇದ್ದದ್ದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ಗೆಳೆಯರು ಆತ ದೇವಸ್ಥಾನಕ್ಕೆ ಬಂದಿಲ್ಲ ಎಂಬುದನ್ನು ಖಚಿತಪಡಿಸಿದ ಬಳಿಕ ಅನುಮಾನ ಮತ್ತಷ್ಟು ಗಾಢವಾಗಿತ್ತು. ಇದಾದ ಬಳಿಕ ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಸುಮಂತ್ ಶವ ಕೆರೆಯಲ್ಲಿ ಪತ್ತೆಯಾಗಿತ್ತು.
ಅನೈತಿಕ ಸಂಬಂಧಕ್ಕೆ ಬಲಿಯಾದನೇ ಮುಗ್ಧ ಸುಮಂತ್ ?
ಸುಮಂತ್ನ ನಿಗೂಢ ಸಾವು ಇದೀಗ ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮುಂಜಾನೆ ಸುಮಂತ್ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆತನಿಗೆ ಯಾರದಾದ್ದರೂ ಅನೈತಿಕ ಸಂಬಂಧದ ಬಗ್ಗೆ ತಿಳಿದು ಹೋಗಿರಬಹುದೇ?
ವಿಷಯ ಬಯಲಾಗಬಹುದು ಎಂದು ಆತನನ್ನು ಕೊಲೆ ಮಾಡಿರಬಹುದೇ ಎಂಬ ಅನುಮಾನ ಮೂಡಿದೆ. ತೋಟದಲ್ಲಿ ಸುಮಂತ್ ಶವ ಪತ್ತೆಯಾಗಿರೋದ್ರಿಂದ ಅಡಿಕೆ ಕಳ್ಳರ ಕೃತ್ಯ ಇರಬಹುದೇ?
ಅಥವಾ ಯಾವುದೋ ಹಿಂದಿನ ವೈಷಮ್ಯಕ್ಕೆ ಸುಮಂತ್ನನ್ನು ಬಲಿ ಪಡೆಯಲಾಯಿತೇ? ಹೀಗೆ ನಾನಾ ಗುಮಾನಿಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿದೆ.
ಮರಣೋತ್ತರ ಪರೀಕ್ಷಾ ವರದಿ ಹೇಳುವುದೇನು?
ಸುಮಂತ್ನ ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತಲೆಯ ಹಿಂಭಾಗದಲ್ಲಿ ಬಲವಾದ ಆಯುಧದಿಂದ ಹೊಡೆತ ನೀಡಲಾಗಿದೆ.
ಅಲ್ಲದೇ ಬಾಲಕ ಉಸಿರುಕಟ್ಟಿ ಸಾವನ್ನಪ್ಪಿದಾನೆ ಎಂದು ಮರಣೋತ್ತರ ವರದಿ ಹೇಳಿದೆ. ಅಂದರೆ ಸುಮಂತ್ ಕೆರೆಗೆ ಬೀಳುವಾಗ ಆತ ಬದುಕಿಯೇ ಇದ್ದ.
ಅಲ್ಲದೇ ಸುಮಂತ್ ಪಾದಗಳಲ್ಲಿ ಚಪ್ಪಲಿ ಕೂಡ ಹಾಗೆಯೇ ಇದ್ದವು ಎನ್ನಲಾಗಿದ್ದು, ಕತ್ತಿಯಿಂದ ತಲೆಗೆ ಬಲವಾಗಿ ಪೆಟ್ಟು ನೀಡಿದ್ದಾಗ ಆತ ಪ್ರಜ್ಞೆ ತಪ್ಪಿ ಬಿದಿದ್ದಾನೆ. ಬಳಿಕ ಆತನನ್ನು ದುಷ್ಕರ್ಮಿಗಳು ಕೆರೆಗೆ ಎಸೆದು ಪರಾರಿಯಾಗಿರುವ ಸಾಧ್ಯತೆಗಳಿವೆ.
ಈ ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಸುಮಂತ್ ಸಾವನ್ನು ಅಸಹಜ ಮರಣ ಎಂದು ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆ ಪ್ರಕರಣವನ್ನಾಗಿ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು: ಅಂತರರಾಜ್ಯ ಗ್ಯಾಂಗ್ ಬಂಧನ, 26 ಲಕ್ಷದ ಆಭರಣ ವಶ
ಸುಮಂತ್ ಕೊಲೆ ಪ್ರಕರಣವನ್ನು ಬೇಧಿಸಲು 4 ಪ್ರತ್ಯೇಕ ತಂಡಗಳನ್ನು ಬೆಳ್ತಂಗಡಿ ಡಿಎಸ್ಪಿ ನೇತೃತ್ವದಲ್ಲಿ ರಚಿಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ತೀವ್ರಗತಿಯಲ್ಲಿ ಸಾಗಿದ್ದು ಶೀಘ್ರದಲ್ಲಿಯೇ ಆರೋಪಿ ಬಲೆಗೆ ಬೀಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.



