ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಮಾಜಿ ಪ್ರಿಯತಮನ ಕಿರುಕುಳ : ವರನಿಂದ ಎಕ್ಸ್ ಲವರ್ ಹತ್ಯೆ
ತಾನು ಮದುವೆಯಾಗಬೇಕಿದ್ದ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ಘಟನೆಯು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಸಂಭವಿಸಿದೆ. ಕೊಲೆಯಾದ ಯುವಕನನ್ನು 21 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಈತ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ನಿವಾಸಿಯಾಗಿದ್ದ ಎನ್ನಲಾಗಿದೆ.
ಹತ್ಯೆಗೈದ ಆರೋಪಿಯನ್ನು ವೇಣು ಎಂದು ಗುರುತಿಸಲಾಗಿದೆ. ಈತ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಮಂಜುನಾಥ್ ನಿರಂತರ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಅಸಲಿಗೆ ಮಂಜುನಾಥ್ ಹಾಗೂ ಆ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಯುವತಿಯ ನಿಶ್ಚಿತಾರ್ಥ ವೇಣು ಜೊತೆ ನಡೆದಿತ್ತು. ವೇಣು ಜೊತೆ ನಿಶ್ಚಿತಾರ್ಥದ ಬಳಿಕ ಇನ್ನು ನನಗೆ ಮೆಸೇಜ್ ಮಾಡಬೇಡ ಎಂದು ಆ ಯುವತಿ ಮಂಜುನಾಥ್ಗೆ ತಿಳಿಸಿದ್ದಳು ಎನ್ನಲಾಗಿದೆ.
ಆದರೂ ಮಂಜುನಾಥ್ ಇನ್ಸ್ಟಾಗ್ರಾಂ ಮೂಲಕ ಮೆಸೇಜ್ ಮಾಡಿ ಹಿಂಸಿಸುತ್ತಿದ್ದ. ಈ ಬಗ್ಗೆ ಯುವತಿ ವೇಣು ಬಳಿ ಹೇಳಿಕೊಂಡಿದ್ದಳು. ಇದಾದ ಬಳಿಕ ವೇಣು ಮಂಜುನಾಥ್ ಬಳಿ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಕರೆಯಿಸಿಕೊಂಡು ಬಳಿಕ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ. ತರೀಕರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮಂಜುನಾಥ್ನನ್ನು ಕೊಲೆ ಮಾಡಲು ವೇಣುವಿಗೆ ಸ್ನೇಹಿತರಾದ ಕಿರಣ್, ಅಪ್ಪು , ಮಂಜು ಎಂಬವರು ಸಹಾಯ ಮಾಡಿದ್ದಾರೆ. ಮಂಜುನಾಥ್ಗೆ ಚಾಕುವಿನಿಂದ ಇರಿದು ಈ ನಾಲ್ವರು ಎಸ್ಕೇಪ್ ಆಗಿದ್ದರು. ಮಂಜುನಾಥ್ನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಬ್ಯಾನರ್ ಕಟ್ಟು ವಿಚಾರಕ್ಕೆ ಜಟಾಪಟಿ : ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ
ಕೊಲೆಗೆ ಕಾರಣವೇನು ?
ಮಂಜುನಾಥನನ್ನು ಈ ಹಿಂದೆ ಪ್ರೀತಿಸಿದ್ದ ಯುವತಿ ವೇಣು ಜೊತೆ ನಿಶ್ಚಿತಾರ್ಥದ ಬಳಿಕ ಆತನನ್ನು ತೊರೆಯುವ ನಿರ್ಧಾರ ಮಾಡಿದ್ದಳು. ಆದರೆ ಇದನ್ನು ಸಹಿಸದ ಮಂಜುನಾಥ್ ಆ ಯುವತಿಯ ಜೊತೆ ಇದ್ದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಚಾರವಾಗಿ ಯುವತಿ ಹಾಗೂ ವೇಣು ನಡುವೆ ಗಲಾಟೆ ನಡೆದು ಆಕೆಯ ಅಣ್ಣ ಕಿರಣ್ವರೆಗೂ ಮಾಹಿತಿ ತಲುಪಿತ್ತು. ಹೀಗಾಗಿ ಕಿರಣ್ ಕೂಡ ಈ ಕೃತ್ಯದಲ್ಲಿ ವೇಣುಗೆ ಸಾಥ್ ನೀಡಿದ್ದ. ಇಬ್ಬರೂ ಸೇರಿ ಮಂಜುನಾಥ್ ಬಳಿಯಲ್ಲಿ ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿ ಅತ್ತಿಗನಾಳು ಬಳಿ ಕರೆಯಿಸಿಕೊಂಡಿದ್ದಾರೆ. ಇಲ್ಲಿ ಮಂಜುನಾಥ್ ಜೊತೆ ಗಲಾಟೆ ಆರಂಭಿಸಿದ ವೇಣು & ಗ್ಯಾಂಗ್ ಬಳಿಕ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದೆ.



