ಭಾರತದ ಅಡುಗೆಗೆ ಟೇಸ್ಟ್‌ಅಟ್ಲಾಸ್‌ ಗರಿ: ಟಾಪ್‌ 15ರಲ್ಲಿ ಎಷ್ಟನೇ ಸ್ಥಾನ?

ಒಂದು ದೇಶದ ಸಂಸ್ಕೃತಿಯನ್ನು ಆಳವಾಗಿ ತಿಳಿಯಬೇಕೆಂದರೆ ಮೊದಲು ಆ ದೇಶದ ಆಹಾರವನ್ನು ಸವಿಯಬೇಕು ಎಂದು ಹೇಳುತ್ತಾರೆ. ಏಕೆಂದರೆ ಆಹಾರ ಮತ್ತು ಸಂಸ್ಕೃತಿ ಒಂದಕ್ಕೊಂದು ಗಾಢವಾಗಿ ಬೆಸೆದುಕೊಂಡಿರುತ್ತದೆ.

ಇದು ಭಾರತಕ್ಕೂ ಅನ್ವಯಿಸುತ್ತದೆ. ಭಾರತ ವೈವಿಧ್ಯ ಪ್ರದೇಶ, ಆಹಾರ ಪದ್ಧತಿ, ಸಂಸ್ಕೃತಿಗಳಿಂದ ಕೂಡಿರುವ ದೇಶ. ಇಲ್ಲಿನ ಪ್ರತಿ ಊರು ಯಾವುದಾದರೂ ಒಂದು ಅಡುಗೆಗೆ ಫೇಮಸ್‌ ಆಗಿದೆ.

ಭಾರತದ ನಾಲ್ಕೂ ದಿಕ್ಕುಗಳು ವಿಭಿನ್ನ ಆಹಾರ ಸಂಸ್ಕೃತಿಯಿಂದ ಜಾಗತಿಕವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಉತ್ತರ ಭಾರತದ ಚೋಲೆ ಭಾತುರೆ, ಪಶ್ಚಿಮದ ಪೂರನ್‌ ಪೋಳಿ, ದಕ್ಷಿಣದ ಇಡ್ಲಿ–ದೋಸೆ ಹಾಗೂ ಪೂರ್ವದ ತುಕ್ಪಾ ಹೀಗೆ ಪ್ರತಿ ಭಾಗವು ವಿಶಿಷ್ಟ ವ್ಯಂಜಗಳಿಂದ ಗುರುತಿಸಿಕೊಂಡಿದೆ.

ಈ ಪಾಕಪದ್ಧತಿಯೇ ಈಗ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸಿಕೊಳ್ಳುವಂತೆ ಮಾಡಿದೆ. ಇತ್ತೀಚೆಗೆ ಟೇಸ್ಟ್‌ಅಟ್ಲಾಸ್‌ ಆಹಾರಕ್ಕೆ ಸಂಬಂಧಿಸಿದ ‘ವಿಶ್ವದ 100 ಅತ್ಯುತ್ತಮ ಪಾಕಪದ್ಧತಿಗಳು 2025/26’ ಅನ್ನು ಬಿಡುಗಡೆಮಾಡಿದೆ.

ಅದರಲ್ಲಿ ಭಾರತದ ಪಾಕಪದ್ಧತಿಯು ಟಾಪ್ 15 ದೇಶಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಮನ್ನಣೆ ಭಾರತದಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯಿಕ ರುಚಿ ಹಾಗೂ ಇಲ್ಲಿನ ಆದರಾತಿಥ್ಯವನ್ನು ಎತ್ತಿ ತೋರಿಸುತ್ತದೆ.

ಭಾರತದ ಪಾಕಪದ್ಧತಿಗೆ ಎಷ್ಟನೇ ಸ್ಥಾನ?

ಟೇಸ್ಟ್‌ಅಟ್ಲಾಸ್‌ ಗರಿಷ್ಠ 5 ಅಂಕಗಳಲ್ಲಿ ಪ್ರತಿಯೊಂದು ದೇಶದ ಆಹಾರಗಳಿಗೆ ನಿರ್ದಿಷ್ಟ ಅಂಕಗಳನ್ನು ನೀಡುತ್ತದೆ. ಅದರ ಆಧಾರದ ಮೇಲೆ ಸ್ಥಾನವನ್ನು ನಿಗದಿಪಡಿಸುತ್ತದೆ.

ಇದರಲ್ಲಿ ಭಾರತೀಯ ಪಾಕಪದ್ಧತಿಯು 4.43 ಅಂಕ ಗಳಿಸಿ 13 ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಪಾಕಪದ್ಧತಿ ವಿಶಿಷ್ಟ ಮಸಾಲೆಗಳು, ನಿಧಾನವಾಗಿ ಬೇಯಿಸುವ ಭಕ್ಷ್ಯಗಳು ಹಾಗೂ ಸಿಹಿ, ಹುಳಿ, ಉಪ್ಪು, ಖಾರ ಮುಂತಾದವುಗಳ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ.

ಭಾರತದ ವಿಶಿಷ್ಟ ರುಚಿಗಳಿಗೆ ಟೇಸ್ಟ್‌ಅಟ್ಲಾಸ್‌ ನೀಡಿರುವ ಈ ಶ್ರೇಯಾಂಕವು ಜಾಗತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ.

ಟೇಸ್ಟ್‌ಅಟ್ಲಾಸ್‌ ಪಟ್ಟಿಯಲ್ಲಿರುವ ಭಾರತೀಯ ಭಕ್ಷ್ಯಗಳು ಹೀಗಿವೆ

ಬಟರ್‌ ಗಾರ್ಲಿಕ್‌ ನಾನ್‌ (4.7)

ಅಮೃತಸರಿ ಕುಲ್ಚಾ(4.7)

ಗರಮ್‌ ಮಸಾಲ (4.6)

ಪರೋಟಾ (4.6)

ಮುಠಿಯಾ (4.6)

ಈ ವ್ಯಂಜನಗಳು ಭಾರತದ ಆಹಾರ ವೈವಿಧ್ಯಕ್ಕೆ ಉತ್ತಮ ನಿದರ್ಶನವಾಗಿದೆ.

PC: ಇನ್‌ಸ್ಟಾಗ್ರಾಂ

ಟಾಪ್‌ 15ರಲ್ಲಿ ಸ್ಥಾನಗಳಿಸಿರುವ ದೇಶಗಳು ಯಾವುವು?

ಟೇಸ್ಟ್‌ಅಟ್ಲಾಸ್‌ನ ಟಾಪ್ 15 ಪಟ್ಟಿಯಲ್ಲಿ ಕ್ರಮವಾಗಿ ಇಟಲಿ, ಗ್ರೀಸ್, ಪೆರು, ಪೋರ್ಚುಗಲ್, ಸ್ಪೇನ್, ಜಪಾನ್, ಟರ್ಕಿ, ಚೀನಾ, ಫ್ರಾನ್ಸ್, ಇಂಡೋನೇಷ್ಯಾ, ಮೆಕ್ಸಿಕೊ, ಸೆರ್ಬಿಯಾ, ಭಾರತ, ಪೋಲೆಂಡ್ ಮತ್ತು ಯುಎಸ್ಎ ಸೇರಿವೆ.

ಇಟಾಲಿಯನ್ ಪಾಕಪದ್ಧತಿಯು 4.64 ಅಂಕಗಳೊಂದಿಗೆ ಜಾಗತಿಕ ಪಾಕಪದ್ಧತಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಿಜ್ಜಾ ನೆಪೋಲೆಟಾನಾ (4.8) ಮತ್ತು ಪಾರ್ಮಿಜಿಯಾನೊ ರೆಗ್ಗಿಯಾನೊ (4.7) ನಂತಹ ಜನಪ್ರಿಯ ಆಹಾರಗಳು ಇಟಲಿಯ ಜಾಗತಿಕ ಆಕರ್ಷಣೆಯನ್ನು ವ್ಯಾಖ್ಯಾನಿಸುತ್ತವೆ.

ಇದನ್ನೂ ಓದಿ: ಭಾರತದಲ್ಲಿ ಜನಸಂಖ್ಯೆ ಏರಿಕೆ, ಯುರೋಪ್‌ನಲ್ಲಿ ಆತಂಕ!

ಗ್ರೀಕ್ ಪಾಕಪದ್ಧತಿಯು 4.6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಫಿನಿಕಿ ಲಕೋನಿಯಾನಸ್ (4.8) ಮತ್ತು ಫಾವಾ ಸ್ಯಾಂಟೊರಿನಿಸ್ (4.7) ನಂತಹ ಭಕ್ಷ್ಯಗಳಿಗೆ ಇದು ಪ್ರಶಂಸಿಸಲ್ಪಟ್ಟಿದೆ.

ಪೆರುವಿಯನ್ ಪಾಕಪದ್ಧತಿಯು 4.54 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಾಲ್ಸಾ ಒಕೊಪಾ (4.8) ಮತ್ತು ಜನಪ್ರಿಯ ಪೊಲೊ ಎ ಲಾ ಬ್ರಾಸಾದಂತಹ ಭಕ್ಷ್ಯಗಳಿಗೆ ಇದು ಗುರುತಿಸಲ್ಪಟ್ಟಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories