ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಘೋಷಣೆ: ಕ್ಯಾಂಟೀನ್, ₹ 1 ಕೋಟಿ ವಿಮೆ, 12 ದಿನ ವಿಶೇಷ ರಜೆ

ಕಾರವಾರ: ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೆ ಗೃಹೋಪಯೋಗಿ ವಸ್ತುಗಳು ಸೇರಿ, ವಿವಿಧ ವಸ್ತುಗಳ ಖರೀದಿಗೆ ಶೇ. 20 ರಿಂದ 25 ರಷ್ಟು ರಿಯಾಯಿತಿ ದರದಲ್ಲಿ ಸೌಲಭ್ಯ ಒದಗಿಸುವ ಕ್ಯಾಂಟೀನ್ ಯೋಜನೆ (Government Employees Military Canteen Scheme) ಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ, ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಂಎಸ್‌ಐಎಲ್ (MSIL) ಮೂಲಕ ಈ ಕ್ಯಾಂಟೀನ್ ಯೋಜನೆ ರೂಪಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಈ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲಾಗುತ್ತದೆ. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸರಕಾರಿ ನೌಕರರಿಗೆ ಮಹತ್ವದ ರಿಯಾಯಿತಿ ಸೌಲಭ್ಯ ವಿಸ್ತರಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ
ಕರ್ನಾಟಕ ರಾಜ್ಯ ಸರಕಾರದ ನೌಕರರಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಬಗ್ಗೆ ಷಡಾಕ್ಷರಿ ಅವರು ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 2026-27ರ ಅಂತ್ಯದ ಒಳಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವೇತನ ಜಾರಿಗೆ ತರಲು ಸಂಘ ಬದ್ದವಾಗಿದೆ ಎಂದಿದ್ದಾರೆ.
ಹಬ್ಬದ ಮುಂಗಡವನ್ನು ರೂ. 25 ಸಾವಿರದಿಂದ ರೂ. 50 ಸಾವಿರ ರೂಪಾಯಿಗೆ ಹೆಚ್ಚಳ, ಹಾಗೂ ಎನ್‌ಪಿಎಸ್ ರದ್ದು ಮಾಡಿ ಓಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೆ ತರುವ ಬಗ್ಗೆ ಸಂಘ ಸತತವಾಗಿ ಪ್ರಯತ್ನಿಸುತ್ತಿದೆ ಎಂದರು.
ಇದನ್ನೂ ಓದಿ : ಶಾಲಾ ಬಿಸಿಯೂಟಕ್ಕೆ ಅಲ್ಯುಮಿನಿಯಂ ಪಾತ್ರೆ ನಿಷೇಧ
ಸರಕಾರಿ ನೌಕರರಿಗೆ 1 ಕೋಟಿ ವಿಮಾ ಸೌಲಭ್ಯ
ರಾಜ್ಯ ಸರಕಾರಿ ನೌಕರರು ಒಂದೊಮ್ಮೆ ಕರ್ತವ್ಯದಲ್ಲಿದ್ದಾಗಲೇ ಮರಣ ಹೊಂದಿದರೆ, 1 ಕೋಟಿ ವಿಮೆ ದೊರೆಯುವ ‘ಸ್ಯಾಲರಿ ಪ್ಯಾಕೇಜ್’ ಯೋಜನೆಯನ್ನು ಜಾರಿಗೆ ತರಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆಯು ಅಕ್ಟೋಬರ್ 1 ರಿಂದ ಜಾರಿಗೆ ಬಂದಿದೆ.
ಪ್ರಥಮ ಹಂತದಲ್ಲಿ ಒಳರೋಗಿಗಳಿಗೆ ಸೌಲಭ್ಯ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಹೊರರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗುವುದು. ಮುಖ್ಯವಾಗಿ, ಮಹಿಳಾ ನೌಕರರು ತಮ್ಮ ತಂದೆ-ತಾಯಿಗಳನ್ನು ಸಹ ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ.
ಮಹಿಳಾ ನೌಕರರಿಗೆ 12 ದಿನ ವಿಶೇಷ ಸಾಂದರ್ಭಿಕ ರಜೆ
ಮಹಿಳಾ ನೌಕರರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ಸಂಘ ಮಾಡಿದ ಮನವಿಗೆ ಸರ್ಕಾರವು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದ್ದು, ಇದರಿಂದ ರಾಜ್ಯದ ಸುಮಾರು 2 ಲಕ್ಷ 25 ಸಾವಿರ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : 23ನೇ ವರ್ಷದಲ್ಲಿ ಎಸಗಿದ ಅಪರಾಧಕ್ಕೆ 81ನೇ ಪ್ರಾತದಲ್ಲಿ ಜಾಮೀನು ಪಡೆದ ವ್ಯಕ್ತಿ
ಸರಕಾರಿ ನೌಕರರ ಸಂಘವು ಪ್ರತಿ ವರ್ಷ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.
ಸರಕಾರಿ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲೆಯ ಶಾಖೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಲ್ಲಿ ಹೆಮ್ಮೆಯ ಸ್ಥಾನದಲ್ಲಿದೆ ಎಂದು ಅವರು ಶ್ಲಾಘಿಸಿದ್ದಾರೆ.
Bumper Announcement for Government Employees: Military Canteen Scheme, ₹1 Cr Insurance, 12 Special Leaves



