ಕುಮಟಾ : ಚಲಿಸುತ್ತಿದ್ದ ವಾಹನಕ್ಕೆ ನುಗ್ಗಿದ ದರೋಡೆಕೋರ, ಸಿನಿಮೀಯ ರೀತಿಯಲ್ಲಿ ಪಾರಾಯ್ತು ಕುಟುಂಬ
ಉತ್ತರ ಕನ್ನಡ: Kumta News: ಚಲಿಸುತ್ತಿದ್ದ ವಾಹನದ ಮೇಲೆ ದರೋಡೆಕೋರರು ಜಿಗಿದು ದರೋಡೆಗೆ ಯತ್ನಿಸಿದ್ದಾರೆ. ಆದರೆ ತೀರ್ಥಯಾತ್ರೆಗೆ ತೆರಳಿದ್ದವರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ಸದ್ಯ ಕುಮಟಾ ಮೂಲದ ಕುಟುಂಬದ ಮೇಲೆ ನಡೆದ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ(Kumta) ತಾಲೂಕಿನ ಕತಗಾಲದ ಕುಟುಂಬವೊಂದು ತೀರ್ಥಯಾತ್ರೆಯನ್ನು ಕೈಗೊಂಡಿತ್ತು. ಗಜಾನನ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಟಿಟಿ ವಾಹನದಲ್ಲಿ ಶಿರಡಿ, ಅಯೋಧ್ಯೆ ಪ್ರವಾಸ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಬಳಿಯಲ್ಲಿ ದರೋಡೆಕೋರರು ಟಿಟಿ ವಾಹನವನ್ನು ಬೈಕಿನಲ್ಲಿ ಹಿಂಬಾಲಿಸಿದ್ದರು. ಮೂರು ಬೈಕಿನಲ್ಲಿದ್ದ ದರೋಡೆಕೋರರ ಪೈಕಿ ಓರ್ವ ಚಲಿಸುತ್ತಿದ್ದ ಬೈಕಿನಿಂದಲೇ ಟಿಟಿ ವಾಹನದ ಹಿಂಬದಿಗೆ ಜಿಗಿದಿದ್ದಾನೆ.
Also Read: ಪರಪ್ಪನ ಅಗ್ರಹಾರ : ಹೊರಗೆ ನೆಟ್‌ವರ್ಕ್ ಸಮಸ್ಯೆ, ಕೈದಿಗಳು ಮೊಬೈಲ್ ಬಳಸ್ತಾರೆ : ಆರ್.ಅಶೋಕ್ ಆರೋಪ
ಟಿಟಿ ವಾಹನದ ಹಿಂಬಾಗಿಲಿನಿಂದ ಒಳ ನುಗ್ಗಿದ ದರೋಡೆಕೋರನನ್ನು ವಾಹನದಲ್ಲಿದ್ದವರು ಹೊರಗೆ ದೂಡಿದ್ದಾರೆ. ಟಿಟಿ ಚಾಲಕ ದರೋಡೆಕೋರರನ್ನು ಗಮನಿಸಿ ವಾಹನ ನಿಲ್ಲಿಸಿದ್ದಾನೆ.
ನಂತರ ದರೋಡೆಕೋರರು ವಾಹನದ ಸುತ್ತುವರಿದು ದಾಳಿಗೆ ಮುಂದಾಗಿದ್ದಾರೆ. ಆದರೆ ಚಾಲಕ ವಾಹನದಲ್ಲಿ ಅಡುಗೆ ಮಾಡಲು ಇಟ್ಟಿದ್ದ ಆಯುಧವನ್ನು ಕೈಯಲ್ಲಿ ಹಿಡಿದು ಅವರನ್ನು ಎದುರಿಸಿದ್ದಾನೆ. ಇದರಿಂದ ಭಯಗೊಂಡ ದರೋಡೆಕೋರರು ಸ್ಥಳದಿಂದ ಕಾಲ್ಕತ್ತಿದ್ದಾರೆ.
ಟಿಟಿ ವಾಹನದಿಂದ ಬ್ಯಾಗ್ ಅನ್ನು ದರೋಡೆಕೋರರು ಕಳವು ಮಾಡಿದ್ದಾರೆ. ಅದೃಷ್ಟವಶಾತ್ ಈ ಬ್ಯಾಗ್‌ನಲ್ಲಿ ಬಟ್ಟೆ ಮಾತ್ರವೇ ಇದ್ದು, ಯಾವುದೇ ಹಣ ಅಥವಾ ಚಿನ್ನಾಭರಣ ಇರಲಿಲ್ಲ.
Also Read: ಮೈಸೂರು ಬಾಲಕಿ ಅತ್ಯಾಚಾರ ಪ್ರಕರಣ : ಸರಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ
ಘಟನೆಯಿಂದಾಗಿ ತೀರ್ಥಯಾತ್ರೆಗೆ ತೆರಳಿದ್ದ ಕುಟುಂಬ ಆತಂಕಕ್ಕೆ ಒಳಗಾಗಿದೆ. ಕರ್ನಾಟಕದ ಪ್ರವಾಸಿಗರ ಮೇಲೆ ದಾಳಿಯ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.
ತೀರ್ಥಯಾತ್ರೆ ಸೇರಿದಂತೆ ಹೊರರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ರಾತ್ರಿಯ ಪ್ರಯಾಣವನ್ನು ಬಿಟ್ಟು, ಹಗಲಿನಲ್ಲಿ ಪ್ರಯಾಣಿಸುವುದು ಹೆಚ್ಚು ಸೂಕ್ತ. ಅಲ್ಲದೇ ಪ್ರವಾಸಕೈಗೊಳ್ಳುವ ಮೊದಲು ವಾಹನದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಒಳಿತು.



