ವರದಕ್ಷಿಣೆ ಕಿರುಕುಳಕ್ಕೆ ಉಪನ್ಯಾಸಕಿ ಆತ್ಮಹತ್ಯೆ ಪ್ರಕರಣ : ಮಗುವಿಗಾಗಿ ಮೈದುನ ಜೊತೆ ಮಲಗಬೇಕೆಂದು ಅತ್ತೆ ಕಿರುಕುಳ
Dowry harassment: ವರದಕ್ಷಿಣೆ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಉಪನ್ಯಾಸಕಿ ದೊಡ್ಡಬಳ್ಳಾಪುರದ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇನ್ನು ಸಾಯುವ ಮುನ್ನ ಉಪನ್ಯಾಸಕಿ ಮಾಡಿರುವ ವಿಡಿಯೋದಲ್ಲಿ ಈಕೆಯ ಗಂಡನ ಮನೆಯವರ ರಾಕ್ಷಸಿ ಕೃತ್ಯಗಳ ಬಗ್ಗೆ ಆಘಾತಕಾರಿ ಅಂಶಗಳು ತಿಳಿದುಬಂದಿದೆ.
ವೃತ್ತಿಯಲ್ಲಿ ಉಪನ್ಯಾಸಕಿ ಆಗಿದ್ದ 28 ವರ್ಷ ಪ್ರಾಯದ ಪುಷ್ಪಾ ಎಂಬವರು ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕಅಪ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು.
2024ರ ನವೆಂಬರ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತಪಸಿಹಳ್ಳಿ ಗ್ರಾಮದ ನಿವಾಸಿ ವೇಣು ಎಂಬವರ ಜೊತೆ ಮೃತ ಪುಷ್ಪಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮೊದ ಮೊದಲು ಚೆನ್ನಾಗಿಯೇ ಇದ್ದ ಗಂಡ ಹಾಗೂ ಆತನ ಮನೆಯವರು ಕ್ರಮೇಣ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ. ತವರು ಮನೆಯಿಂದ ಹಣ ಹಾಗೂ ಸೈಟ್ ಕೊಡಿಸುವಂತೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
Also Read: ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಘೋಷಣೆ: ಕ್ಯಾಂಟೀನ್, ₹ 1 ಕೋಟಿ ವಿಮೆ, 12 ದಿನ ವಿಶೇಷ ರಜೆ
ಪುಷ್ಪಾ ತವರು ಮನೆಯಿಂದ ತನಗೆ ಸೈಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಿತ್ಯ ಪತ್ನಿಗೆ ವೇಣು ಕಿರುಕುಳ ನೀಡುತ್ತಿದ್ದ. ಅಲ್ಲದೇ ಸೈಟ್ ಸಿಗುವವರೆಗೂ ನಿನ್ನೊಂದಿಗೆ ಸಂಸಾರ ಮಾಡಲಾರೆ ಎಂದು ಕಳೆದ 9 ತಿಂಗಳಿನಿಂದ ಪುಷ್ಪಾಳನ್ನು ದೂರವೇ ಇಟ್ಟಿದ್ದ ಎನ್ನಲಾಗಿದೆ.

ಪತಿಯ ಮನೆಯಲ್ಲಿ ತನಗಾಗುತ್ತಿರುವ ಕಿರುಕುಳವನ್ನು ಪುಷ್ಪಾ ತವರು ಮನೆಯಲ್ಲಿ ಹೇಳಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಮದುವೆ – ಸಂಸಾರ ಎಂದಮೇಲೆ ಭಿನ್ನಾಭಿಪ್ರಾಯಗಳು ಸಹಜ ಎಂದು ಹೇಳಿ ತವರು ಮನೆಯವರೇ ಕಳೆದ ತಿಂಗಳು ಪುಷ್ಪಾಳನ್ನು ಗಂಡನ ಮನೆಗೆ ವಾಪಾಸ್ ಕಳಿಸಿದ್ದರು ಎನ್ನಲಾಗಿದೆ.
ಇನ್ನು ಮದುವೆಯಾದಾಗಿನಿಂದ ಪತ್ನಿಯನ್ನು ವೇಣು ದೂರವೇ ಇಟ್ಟಿದ್ದರಿಂದ ಇವರ ನಡುವೆ ಪತಿ – ಪತ್ನಿ ಸಂಬಂಧವೇ ಇರಲಿಲ್ಲ. ನನಗೆ ಮಗು ಬೇಕು ಎಂದು ಪುಷ್ಪಾ ಕೇಳಿದಾಗ ನಿನಗೆ ಮಗು ಬೇಕು ಎಂದರೆ ನನ್ನ ಸಣ್ಣ ಮಗನ ಜೊತೆ ಮಲಗು ಎಂದು ವೇಣು ತಾಯಿ ಅಂದರೆ ಪುಷ್ಪಾ ಅತ್ತೆ ಹಿಂಸೆ ನೀಡಿದ್ದರು ಎಂದು ತಿಳಿದು ಬಂದಿದೆ.
Also Read: ಕೆಡಿಸಿಸಿ ಬ್ಯಾಂಕ್ ಚುನಾವಣೆ: 44 ನಾಮಪತ್ರ ಅಂಗೀಕಾರ, ಮಂಕಾಳ ವೈದ್ಯ ಆಯ್ಕೆ ಖಚಿತ
ಅಲ್ಲದೇ ಮೈದುನ ಕೂಡ ನನಗೆ ಹಿಂಸೆ ನೀಡಿದ್ದ ಎಂದು ವಿಡಿಯೋದಲ್ಲಿ ಸ್ವತಃ ಪುಷ್ಪಾ ಹೇಳಿಕೊಂಡಿದ್ದಾಳೆ. ಪುಷ್ಪಾಳ ಮದುವೆ ಸಂದರ್ಭದಲ್ಲಿ ಪುಷ್ಪಾ ತಂದೆ ನಾರಾಯಣಪ್ಪ 5 ಲಕ್ಷ ರೂಪಾಯಿ ವರದಕ್ಷಿಣೆ , ಜೊತೆಯಲ್ಲಿ ಚಿನ್ನಾಭರಣ ನೀಡಿದ್ದಾರೆ.
ಮಾತ್ರವಲ್ಲದೇ ಅದ್ಧೂರಿಯಾಗಿ ವಿವಾಹವನ್ನೂ ಮಾಡಿಕೊಟ್ಟಿದ್ದಾರೆ. ಆದರೂ ಪುಷ್ಪಾಳಿಗೆ ಗಂಡನ ಮನೆಯಲ್ಲಿ ನಿತ್ಯ ಮಾನಸಿಕ ಹಿಂಸೆ ಖಾಯಂ ಆಗಿತ್ತು.
ಇದರಿಂದ ಮನನೊಂದ ಪುಷ್ಪಾ ಆತ್ಮಹತ್ಯೆಗೆ ಶರಣಾಗಿದ್ದು ಪುಷ್ಪಾ ಕುಟುಂಬಸ್ಥರು ಪತಿ ವೇಣು, ಅತ್ತೆ ಭಾರತಿ , ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.



