ಅಹಿಂದಕ್ಕೆ ಬದಲಾಗಿ ಒಕ್ಕಲಿಗ ಅಸ್ತ್ರ : ಹೈಕಮಾಂಡ್​ ಎದುರು ಪಟ್ಟು ಹಿಡಿದ ಡಿಕೆಶಿ ಬಣ

ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಜೆಟ್​ ಮಂಡಿಸುವವನು ನಾನೇ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ನವೆಂಬರ್​ ಕ್ರಾಂತಿಯ ಗೊಂದಲಕ್ಕೆ ತೆರೆ ಎಳೆದಿದ್ದರು. ಇಲ್ಲಿಗೆ ಎಲ್ಲವೂ ತಣ್ಣಗಾಯ್ತು ಎನ್ನುವಷ್ಟರಲ್ಲಿ ಇದೀಗ ಪಟ್ಟು ಬಿಡದ ಡಿ.ಕೆ ಶಿವಕುಮಾರ್ ಪಡೆ ಹೊಸ ಅಸ್ತ್ರದೊಂದಿಗೆ ದೆಹಲಿ ಅಂಗಳಕ್ಕೆ ಕಾಲಿಟ್ಟಿದೆ.

ಡಿಸಿಎಂ ಡಿ.ಕೆ ಶಿವಕುಮಾರ್​ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್, ಆನೇಕಲ್ ಶಾಸಕ ಶಿವಣ್ಣ, ಗುಬ್ಬಿ ಶಾಸಕ ಎಸ್‌.ಆರ್ ಶ್ರೀನಿವಾಸ್, ಕುಣಿಗಲ್ ಶಾಸಕ ರಂಗನಾಥ್, ಮಂಡ್ಯ ಶಾಸಕ ರವಿಗಣಿಗ, ಶೃಂಗೇರಿ ಶಾಸಕ ರಾಜೇಗೌಡ ದೆಹಲಿ ಕಡೆ ಮುಖ ಮಾಡಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಡಿಕೆ ಬಣದೊಂದಿಗೆ ಮಾತುಕತೆಯಿಂದ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಖರ್ಗೆ ನಿವಾಸದಿಂದ ನೇರವಾಗಿ ಏರ್​ಪೋರ್ಟ್ ಮುಖ ಮಾಡಿದ್ದಾರೆ.

ಇನ್ನೊಂದು ಕಡೆ ಕೃಷಿ ಸಚಿವ ಎನ್​.ಚೆಲುವರಾಯಸ್ವಾಮಿ ಕೂಡ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಇಂದು ಚೆಲುವರಾಯಸ್ವಾಮಿ ಅವರೊಂದಿಗೆ ತುರ್ತು ಸಭೆ ಏರ್ಪಡಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ದೆಹಲಿಯ ಕಡೆಗೆ ಒಕ್ಕಲಿಗ ನಾಯಕರೇ ದೌಡಾಯಿಸುತ್ತಿರುವುದನ್ನು ನೋಡಿದರೆ ಡಿ.ಕೆ ಬಣ ಒಕ್ಕಲಿಗ ಅಸ್ತ್ರ ಪ್ರಯೋಗಿಸುತ್ತಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು, ಡಿಕೆಗೆ ಅವಕಾಶ ನೀಡದೇ ಹೋದಲ್ಲಿ ಕಾಂಗ್ರೆಸ್​ ಒಕ್ಕಲಿಗರ ವಿರೋಧ ಎದುರಿಸುವ ಸಾಧ್ಯತೆ ಇದೆ.

ಬಿಜೆಪಿ, ಜೆಡಿಎಸ್​ ಮೈತ್ರಿಯಿಂದಾಗಿ ಈಗಾಗಲೇ ಕೆಲ ಒಕ್ಕಲಿಗರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಕೊಟ್ಟ ಮಾತಿನಂತೆಯೇ 2ನೇ ಅವಧಿಯಲ್ಲಿ ಒಕ್ಕಲಿಗ ಸಿಎಂ ಸ್ಥಾನ ನೀಡೋದೇ ಹೋದಲ್ಲಿ ಕಾಂಗ್ರೆಸ್​ಗೆ ಒಕ್ಕಲಿಗ ಮತ ಬ್ಯಾಂಕ್​ ಕೈತಪ್ಪುವ ಸಾಧ್ಯತೆ ಇದೆ . ಇದೇ ವಿಚಾರವನ್ನು ಮುಂದಿಟ್ಟುಕೊಂಡು 3 ಪ್ರತ್ಯೇಕ ತಂಡಗಳೊಂದಿಗೆ ಕಾಂಗ್ರೆಸ್​ ಹೈಕಮಾಂಡ್​ ಭೇಟಿ ಮಾಡಿ ಮಾತನಾಡುವುದು ಡಿ.ಕೆ ಬಣದ ಪ್ಲಾನ್​ ಆಗಿದೆ.

ಇದನ್ನೂ ಓದಿ: ‘ನವೆಂಬ‌ರ್ ಕ್ರಾಂತಿ ಇಲ್ಲದ ಮೇಲೆ ಸಿಎಂ, ಡಿಸಿಎಂ ದೆಹಲಿಯಲ್ಲಿ ಏನು ಮಾಡ್ತಿದ್ದಾರೆ’ : ಆರ್.ಅಶೋಕ್

ನವೆಂಬರ್​ ಕ್ರಾಂತಿ ಇಲ್ಲ , ಇನ್ನೇನಿದ್ದರೂ ಸಂಕ್ರಾಂತಿ ಕ್ರಾಂತಿ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿತ್ತು. ಆದರೆ ಇದೀಗ ಡಿ.ಕೆ ಶಿವಕುಮಾರ್​ ಜಾತಿ ಅಸ್ತ್ರ ಹಿಡಿದು ತನ್ನ ಬಣದವರನ್ನು ಹೈಕಮಾಂಡ್​ ಮುಂದೆ ಬಿಟ್ಟಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಏರ್ಪಡುವ ಮುನ್ಸೂಚನೆ ನೀಡಿದೆ. ಒಟ್ನಲ್ಲಿ ಸಿದ್ದರಾಮಯ್ಯ ಅಹಿಂದ ಅಸ್ತ್ರ, ಡಿಕೆಶಿ ಒಕ್ಕಲಿಗ ಅಸ್ತ್ರದಿಂದಾಗಿ ಕಾಂಗ್ರೆಸ್​ ಹೈಕಮಾಂಡ್​ ಸುಸ್ತಾಗಿ ಹೋಗಿರುವುದಂತೂ ಗ್ಯಾರಂಟಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories