ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ: ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಬಾಂಧವರು

ಮುಂಜಾನೆಯೇ ಹೊಸ ಬಟ್ಟೆ ಧರಿಸಿ ಮಸೀದಿಗಳಿಗೆ ಆಗಮಿಸಿದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಾವರ, ಹೆಬ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮಸೀದಿಗಳಲ್ಲಿ ಹಬ್ಬದ ಕಳೆ ಮನೆಮಾಡಿತ್ತು

ಉಡುಪಿ: ಕರಾವಳಿಯಾದ್ಯಂತ ಪವಿತ್ರ ರಂಜಾನ್ ಮಾಸದ ಉಪವಾಸ ಮುಕ್ತಾಯಗೊಂಡು, ಶುಕ್ರವಾರ ಜಿಲ್ಲೆಯಾದ್ಯಂತ ‘ಈದುಲ್ ಫಿತ್ರ್’ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಉಡುಪಿ ನಗರ ಸೇರಿದಂತೆ ಕಾಪು, ಕುಂದಾಪುರ, ಬೈಂದೂರು ಹಾಗೂ ಕಾರ್ಕಳದ ವಿವಿಧ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ ನಮಾಜ್‌ನಲ್ಲಿ ಪಾಲ್ಗೊಂಡಿದ್ದರು.

ರಂಜಾನ್ : ಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

ಮುಂಜಾನೆಯೇ ಹೊಸ ಬಟ್ಟೆ ಧರಿಸಿ ಮಸೀದಿಗಳಿಗೆ ಆಗಮಿಸಿದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಾವರ, ಹೆಬ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮಸೀದಿಗಳಲ್ಲಿ ಹಬ್ಬದ ಕಳೆ ಮನೆಮಾಡಿತ್ತು. ಕೆಲವು ಕಡೆಗಳಲ್ಲಿ ಮಹಿಳೆಯರಿಗೂ ನಮಾಜ್ ನಿರ್ವಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪ್ರಾರ್ಥನೆಯ ನಂತರ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಹಬ್ಬದ ಅಂಗವಾಗಿ ಬಡವರ ಹಸಿವು ನೀಗಿಸುವ ಉದ್ದೇಶದಿಂದ ‘ಫಿತರ್ ಝಕಾತ್’ ನೀಡುವ ಮೂಲಕ ಮುಸ್ಲಿಂ ಬಾಂಧವರು ಔದಾರ್ಯ ಮೆರೆದರು. ಸಮಾಜದ ಪ್ರತಿಯೊಬ್ಬರೂ ಹಬ್ಬದ ಸಂಭ್ರಮದಲ್ಲಿ ಸಮಾನವಾಗಿ ಭಾಗಿಯಾಗಬೇಕು ಎಂಬ ತತ್ವವನ್ನು ಈ ಮೂಲಕ ಸಾರಲಾಯಿತು.

ಇದನ್ನೂ ಓದಿ : ರಂಜಾನ್ ಹಬ್ಬ: ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿ ಯಾವ ಜಿಲ್ಲೆಗಳಲ್ಲಿ ರಜೆ

ಸೌಹಾರ್ದತೆಯ ಸಂದೇಶ ನೀಡಿದ ಖಾಸಿಂ ಸಅದಿ

ದೊಡ್ಡಣಗುಡ್ಡೆ ಮಸೀದಿಯಲ್ಲಿ ಸಂದೇಶ ನೀಡಿದ ಖತೀಬರಾದ ಖಾಸಿಂ ಸಅದಿ ಅವರು, ರಂಜಾನ್ ಕಲಿಸಿದ ಶಿಸ್ತು ಮತ್ತು ತಾಳ್ಮೆ ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು ಎಂದು ಕರೆ ನೀಡಿದರು.

ಅನ್ಯ ಧರ್ಮೀಯರ ಬಾಂಧವರ ಜೊತೆಗೆ ಪ್ರೀತಿ, ವಿಶ್ವಾಸದಿಂದ ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಅನಾಚಾರ ಮತ್ತು ದುಂದು ವೆಚ್ಚಗಳಿಗೆ ಅವಕಾಶ ನೀಡಬಾರದು. ಶರೀಅತ್‌ ಚೌಕಟ್ಟಿನೊಳಗೆ ಸಂಭ್ರಮ ಪಡಬೇಕು ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಹಾಹಾಕಾರ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ತುರ್ತು ಪತ್ರ

ರಂಜಾನ್‌ ಹಬ್ಬ ನಮಗೆ ತಾಳ್ಮೆ ಮತ್ತು ದೈವ ಭಕ್ತಿಯನ್ನು ಕಲಿಸಿದ್ದು, ಅದು ನಮ್ಮ ಮುಂದಿನ ಜೀವನದ ದಾರಿದೀಪ ಆಗಬೇಕು. ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಈದ್ ಹಬ್ಬವನ್ನು ಆಚರಿಸಲಾಗಿದ್ದು, ಜಾಗತಿಕ ಸಾಮರಸ್ಯಕ್ಕೆ ಈ ಸಂಭ್ರಮ ಪ್ರೇರಣೆಯಾಯಿತು.

eid ul fitr celebrations across Udupi

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories