ಅಪ್ಪಿತಪ್ಪಿ ಹಾಗಲಕಾಯಿ ಜೊತೆ ಇವು ತಿನ್ನಬೇಡಿ: ಹುಷಾರ್ ಆರೋಗ್ಯಕ್ಕೆ ಅಪಾಯ!
ಹಾಗಲಕಾಯಿ ಆರೋಗ್ಯಕ್ಕೆ ಲಾಭಕರವಾದರೂ, ಕೆಲವು ಆಹಾರಗಳ ಜೊತೆ ಸೇವಿಸಿದರೆ ಹೊಟ್ಟೆ ಸಮಸ್ಯೆ, ಅಸಿಡಿಟಿ ಮತ್ತು ಚರ್ಮದ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹಾಗಲಕಾಯಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಬಹಳ ಉಪಯುಕ್ತವಾದ ತರಕಾರಿ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ಮಧುಮೇಹ ನಿಯಂತ್ರಣಕ್ಕೆ ಇದು ಸಹಕಾರಿ ಎಂದು ವೈದ್ಯರು ಹೇಳುತ್ತಾರೆ. ಜೊತೆಗೆ ತೂಕ ಇಳಿಕೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲೂ ಇದು ಸಹಾಯ ಮಾಡುತ್ತದೆ.
ಆಯುರ್ವೇದದ ಪ್ರಕಾರ ಹಾಗಲಕಾಯಿಯಲ್ಲಿ ವಿಟಮಿನ್-C, ಪೊಟ್ಯಾಸಿಯಂ, ಐರನ್, ಜಿಂಕ್ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಆದರೆ ಇದರೊಂದಿಗೆ ಕೆಲವು ಆಹಾರಗಳನ್ನು ಸೇರಿಸಿ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಾಗಲಕಾಯಿಯ ಜೊತೆ ಮಾವಿನಹಣ್ಣು ಸೇವಿಸುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಎರಡನ್ನು ಒಟ್ಟಿಗೆ ಸೇವಿಸಿದರೆ ಅಸಿಡಿಟಿ, ಹೊಟ್ಟೆ ಉರಿಯೂತ ಮತ್ತು ಅಸ್ವಸ್ಥತೆ ಕಾಣಿಸಬಹುದು.
ಮೊಸರಿನ ಜೊತೆಗೆ ಹಾಗಲಕಾಯಿ ತಿನ್ನುವುದನ್ನೂ ತಪ್ಪಿಸುವುದು ಉತ್ತಮ. ಈ ಕಾಂಬಿನೇಷನ್ ಕೆಲವರಲ್ಲಿ ಚರ್ಮದ ಅಲರ್ಜಿ, ಕೆರಕು ಹಾಗೂ ರ್ಯಾಶ್ ಸಮಸ್ಯೆಗೆ ಕಾರಣವಾಗಬಹುದು ಎನ್ನಲಾಗಿದೆ.
ಹಾಗಲಕಾಯಿ ತಿಂದ ತಕ್ಷಣ ಹಾಲು ಕುಡಿಯುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಹೊಟ್ಟೆ ಉಬ್ಬರ, ಮಲಬದ್ಧತೆ ಅಥವಾ ಹೊಟ್ಟೆ ಉರಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಮೂಲಂಗಿ ಮತ್ತು ಹಾಗಲಕಾಯಿ ಎರಡರ ಸ್ವಭಾವ ವಿಭಿನ್ನವಾಗಿರುವುದರಿಂದ, ಒಟ್ಟಿಗೆ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಶೀತ ಅಥವಾ ಕೆಮ್ಮು ಇರುವವರು ಈ ಕಾಂಬಿನೇಷನ್ ತಪ್ಪಿಸುವುದು ಉತ್ತಮ.
ಬೆಂಡೆಕಾಯಿ ಮತ್ತು ಹಾಗಲಕಾಯಿ ಸೇರಿಸಿ ತಿನ್ನುವುದರಿಂದ ಕೆಲವರಿಗೆ ಹೊಟ್ಟೆ ಕೆಡಿಸಿಕೊಳ್ಳುವ ಸಾಧ್ಯತೆ ಇದೆ. ಜೀರ್ಣಕ್ರಿಯೆ ನಿಧಾನವಾಗುವುದು ಅಥವಾ ಹೊಟ್ಟೆ ಅಸ್ವಸ್ಥತೆ ಕಾಣಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಒಟ್ಟಾರೆ, ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದಾದರೂ ಸರಿಯಾದ ಆಹಾರ ಸಂಯೋಜನೆ ಪಾಲಿಸುವುದು ಅತ್ಯಗತ್ಯ. ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಆಹಾರ ಕ್ರಮ ಅನುಸರಿಸುವುದು ಉತ್ತಮ.



