ಹಂತಾ ವೈರಸ್ ಅಟ್ಟಹಾಸಕ್ಕೆ ಮೂರು ಸಾವು ! ಏನಿದು ಹಂತಾ ವೈರಸ್? ಭಾರತಕ್ಕೆ ಇದೆಯೇ ಅಪಾಯ ?
ಸೋಂಕಿತ ಇಲಿಗಳ ಮೂತ್ರ, ಲಾಲಾರಸ ಅಥವಾ ಮಲದೊಂದಿಗೆ ಮನುಷ್ಯರು ಸಂಪರ್ಕಕ್ಕೆ ಬಂದಾಗ ಈ ವೈರಸ್ ಹರಡುತ್ತದೆ. ವಿಶೇಷವೆಂದರೆ, ಇದು ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ.
ಜಗತ್ತು ಇನ್ನು ಕೊರೊನಾ ಮಹಾಮಾರಿಯ ಆಘಾತದಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಈ ನಡುವಲ್ಲೇ ಮತ್ತೊಂದು ಮಾರಕ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಐಷಾರಾಮಿ ಹಡಗೊಂದರಲ್ಲಿ ಸಂಭವಿಸಿದ ಮೂವರ ಸಾವು ಪ್ರಕರಣ ಇದೀಗ ಜಾಗತಿಕ ಮಟ್ಟದಲ್ಲಿ ಭೀತಿ ಮೂಡಿಸಿದ್ದು, ಇದಕ್ಕೆ ಕಾರಣ ‘ಹಂತಾ ವೈರಸ್’ (Hantavirus) ಎಂದು ಗುರುತಿಸಲಾಗಿದೆ. ಅಷ್ಟಕ್ಕೂ ಏನಿದು ಹಂತಾ ವೈರಸ್, ಭಾರತಕ್ಕೂ ಇದರ ಅಪಾಯ ಇದೆಯಾ ? ಹಂತಾ ವೈರಸ್ ತಡೆಗಟ್ಟಲು ಇರುವ ಉಪಾಯಗಳೇನು ಅನ್ನೋ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಹಂತಾ ವೈರಸ್ (Hantavirus)?
ಹಂತಾ ವೈರಸ್ ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಿಂದ ಹರಡುವ ವೈರಸ್ ಕುಟುಂಬಕ್ಕೆ ಸೇರಿದೆ. ಈ ವೈರಸ್ ಉಸಿರಾಟದ ಮೇಲೆ ಗಂಭೀರವಾಗಿರುವ ಪರಿಣಾಮ ಬೀರುತ್ತದೆ. ಸೋಂಕಿತ ಇಲಿಗಳ ಮೂತ್ರ, ಲಾಲಾರಸ ಅಥವಾ ಮಲದೊಂದಿಗೆ ಮನುಷ್ಯರು ಸಂಪರ್ಕಕ್ಕೆ ಬಂದಾಗ ಈ ವೈರಸ್ ಹರಡುತ್ತದೆ. ವಿಶೇಷವೆಂದರೆ, ಇದು ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ. ಇಲಿಗಳು ಓಡಾಡಿದ ಜಾಗದ ಧೂಳನ್ನು ನಾವು ಉಸಿರಾಡಿದಾಗ ಈ ವೈರಸ್ ನಮ್ಮ ದೇಹ ಸೇರುವ ಸಾಧ್ಯತೆಯಿದೆ.
ಕೊರೊನಾ ಮಾದರಿಯಲ್ಲೇ ಹಂತಾ ವೈರಸ್ ಆತಂಕ ಏಕೆ ?
ಹಂತಾ ವೈರಸ್ ಕೂಡ ಕೊರೊನಾದಂತೆ ಶ್ವಾಸಕೋಶದ ಮೇಲೆ ತೀವ್ರವಾದ ದಾಳಿ ಮಾಡುತ್ತದೆ. ಇದನ್ನು ವೈದ್ಯಕೀಯ ಲೋಕದಲ್ಲಿ ‘ಹಂತಾ ವೈರಸ್ ಪಲ್ಮನರಿ ಸಿಂಡ್ರೋಮ್’ (HPS) ಎಂದು ಕರೆಯಲಾಗುತ್ತದೆ. ಇದರ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಸ್ನಾಯು ನೋವು ಮತ್ತು ಸುಸ್ತು. ಇದು ಸಾಮಾನ್ಯ ಜ್ವರದಂತೆ ಕಂಡರೂ, ಕೆಲವೇ ದಿನಗಳಲ್ಲಿ ಉಸಿರಾಟದ ತೀವ್ರ ತೊಂದರೆಗೆ ಕಾರಣವಾಗುತ್ತದೆ. ಕೊರೊನಾಗೆ ಹೋಲಿಸಿದರೆ ಹಂತಾ ವೈರಸ್ನ ಮರಣ ಪ್ರಮಾಣ (Fatality Rate) ಶೇ. 38ರಷ್ಟಿದೆ, ಇದು ಅತ್ಯಂತ ಅಪಾಯಕಾರಿ.
ವಿಶ್ವದಲ್ಲಿ ಹಂತಾ ವೈರಸ್ ಇತಿಹಾಸ
ಹಂತಾ ವೈರಸ್ ಹೊಸದೇನಲ್ಲ. 1950ರ ದಶಕದ ಕೊರಿಯನ್ ಯುದ್ಧದ ಸಮಯದಲ್ಲಿ ಇದು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು. ಅಂದಿನಿಂದ ಇಂದಿನವರೆಗೆ ವಿಶ್ವದ ವಿವಿಧ ಭಾಗಗಳಲ್ಲಿ ಇದು ಸಾವಿರಾರು ಜನರನ್ನು ಬಲಿ ಪಡೆದಿದೆ. ಅಮೆರಿಕ, ಚೀನಾ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ ಈ ವೈರಸ್ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ವರ್ಷಕ್ಕೆ ಸರಾಸರಿ ನೂರಾರು ಜನ ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ ಅನ್ನೋದು ಕಳವಳಕಾರಿ ಸಂಗತಿ.
Also Read : ತೈಲ ಬಳಕೆ ತಗ್ಗಿಸಿ, ಚಿನ್ನ ಖರೀದಿಸಲೇ ಬೇಡ: ಪ್ರಧಾನಿ ಮೋದಿ ಮಹತ್ವದ ಕರೆ, ವರ್ಕ್ ಫ್ರಂ ಹೋಮ್ ಕಡ್ಡಾಯ
ಭಾರತಕ್ಕೆ ಹಂತಾ ವೈರಸ್ ಕಾಲಿಡುವ ಸಾಧ್ಯತೆಯಿದೆಯಾ?
ಭಾರತದಲ್ಲಿ ಈಗಾಗಲೇ ಈ ವೈರಸ್ನ ಕೆಲವೇ ಕೆಲವು ಪ್ರಕರಣಗಳು ಹಿಂದೆ ವರದಿಯಾಗಿವೆ. ಆದರೆ ಇದುವರೆಗೂ ಕೊರೊನಾದಂತೆ ದೊಡ್ಡ ಮಟ್ಟದ ಸಾಂಕ್ರಾಮಿಕವಾಗಿ ಹರಡಿಲ್ಲ. ಆದರೂ, ಭಾರತದಂತಹ ದಟ್ಟ ಜನಸಂಖ್ಯೆ ಮತ್ತು ಇಲಿಗಳ ಕಾಟವಿರುವ ಪ್ರದೇಶಗಳಲ್ಲಿ ಈ ವೈರಸ್ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹವಾಮಾನ ವೈಪರೀತ್ಯ ಮತ್ತು ನೈರ್ಮಲ್ಯದ ಕೊರತೆ ಈ ವೈರಸ್ ಹರಡಲು ವೇದಿಕೆ ಕಲ್ಪಿಸಬಹುದು. ಸದ್ಯಕ್ಕೆ ಹಡಗಿನಲ್ಲಿ ಸಂಭವಿಸಿದ ಸಾವುಗಳು ಅಂತರಾಷ್ಟ್ರೀಯ ಪ್ರಯಾಣಿಕರ ಮೂಲಕ ದೇಶಕ್ಕೆ ಬರುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.
ಹಂತಾ ವೈರಸ್ ತಡೆಗಟ್ಟುವ ಕ್ರಮಗಳೇನು?
- ಮನೆ ಮತ್ತು ಸುತ್ತಮುತ್ತ ಇಲಿಗಳು ಬರದಂತೆ ಎಚ್ಚರ ವಹಿಸಿ.
- ಧೂಳು ತುಂಬಿದ ಹಳೆಯ ಕೊಠಡಿಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ.
- ಆಹಾರ ಪದಾರ್ಥಗಳನ್ನು ಇಲಿಗಳು ಮುಟ್ಟದಂತೆ ಸುರಕ್ಷಿತವಾಗಿ ಇಡಿ.
- ಜ್ವರದ ಜೊತೆಗೆ ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹಂತಾ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವುದು ಅಪರೂಪವಾದರೂ, ದಂಶಕಗಳ ಮೂಲಕ ಇದು ವೇಗವಾಗಿ ಹರಡಬಲ್ಲದು. ಆದ್ದರಿಂದ ಸಾರ್ವಜನಿಕರು ಆತಂಕಪಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ.
hanta virus outbreak luxury cruise deaths symptoms india risk alert



