ಮನೆಗೆಲಸದ ಸೋಗಿನಲ್ಲಿ ಬಂದು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಎಗರಿಸಿದ ಖದೀಮ ದಂಪತಿ
ಬೆಂಗಳೂರು: ಬಿಲ್ಡರ್ ಒಬ್ಬರ ನಿವಾಸದಲ್ಲಿ ಮನೆಕೆಲಸದವರಾಗಿ ಕೆಲಸ ಮಾಡುತ್ತಿದ್ದ ದಂಪತಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳುವು ಮಾಡಿ ಪರಿಹಾರಿಯಾಗುವ ಘಟನೆಯು ರಾಜ್ಯ ರಾಜಧಾನಿ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯಮಲೂರಿನಲ್ಲಿರುವ ಬಿಲ್ಡರ್ ಶಿವಕುಮಾರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ದಿನೇಶ ಹಾಗೂ ಕಮಲಾ ಕೇವಲ 20 ದಿನಗಳ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ವಿಕಾಸ್ ಹಾಗೂ ವಿಷ್ಣು ಎಂಬ ಮಧ್ಯವರ್ತಿಗಳ ಸಹಾಯದಿಂದ ಅವರಿಗೆ ಇಲ್ಲಿ ಕೆಲಸ ದೊರಕಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಮ್ಮ ಚಾಲಾಕಿತನ ತೋರಿದ ಖದೀಮರು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಕದ್ದು ಪರಾರಿಯಾಗಿದ್ದರು. ಜನವರಿ 25ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿಗಳು ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿರುವ ಮಲಗುವ ಕೋಣೆಗಳಲ್ಲಿ ಇದ್ದ ಲಾಕರ್ಗಳನ್ನು ಕಬ್ಬಿಣದ ರಾಡ್ನಿಂದ ಒಡೆದಿದ್ದಾರೆ. ಇದರಲ್ಲಿದ್ದ 11.5 ಕೆಜಿ ಮೌಲ್ಯದ ಚಿನ್ನ, 5 ಕೆ.ಜಿ ಬೆಳ್ಳಿ ಹಾಗೂ 11.5 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಕದ್ದ ಎಲ್ಲಾ ವಸ್ತುಗಳ ಒಟ್ಟೂ ಮೌಲ್ಯ ಸುಮಾರು 18 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮನೆಯ ಲಾಕರ್ ಮುರಿದು ಹೋಗಿರುವುದನ್ನು ಗಮನಿಸಿದ ಮನೆಯ ಇತರೆ ಸಿಬ್ಬಂದಿ ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ಈ ಸಂಬಂಧ ಕುಟುಂಬಸ್ಥರು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಘಟನೆ ಬಳಿಕ ಮನೆ ಕೆಲಸ ಮಾಡುತ್ತಿದ್ದ ದಂಪತಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಅವರ ಮೊಬೈಲ್ ಫೋನ್ಗಳೂ ಸ್ವಿಚ್ಆಫ್ ಆಗಿದ್ದವು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ . ಅಲ್ಲದೇ ಆರೋಪಿಗಳಿಗೆ ಬೇರೆ ಯಾವುದೇ ಗ್ಯಾಂಗ್ಗಳ ಜೊತೆ ಸಂಪರ್ಕ ಇದೆಯೇ ? ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: 2ನೇ ಮದುವೆಯಾದ ತಾಯಿ; ಮಗನಿಂದಲೇ ಭೀಕರ ಹಲ್ಲೆ: ಚಾಕುವಿನಿಂದ ಇರಿದು ಪರಾರಿ
ಸಮೀಪದ ರಸ್ತೆಗಳು, ರೈಲ್ವೆ ನಿಲ್ದಾಣ ಹಾಗೂ ಬಸ್ ಟರ್ಮಿನಲ್ಗಳಲ್ಲಿರುವ ಸಿ.ಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಕಲೆ ಹಾಕಲಾಗಿದ್ದು ಆರೋಪಿಗಳ ಚಲನವಲನ ವೀಕ್ಷಣೆಗೆಂದೇ ತಂಡ ರಚನೆ ಮಾಡಲಾಗಿದೆ. ಅಲ್ಲದೇ ಈ ದಂಪತಿಗೆ ಉದ್ಯೋಗ ಮಾಡಿಸಿಕೊಂಡ ಮಧ್ಯವರ್ತಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.



