ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆ ಗಡಿಪಾರು ಸಂಕಷ್ಟ!
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆ ಗಡಿಪಾರು ಸಂಕಷ್ಟ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಮಹೇಶ್ ಶೆಟ್ಟಿ ತಿಮರೋಡಿಗೆ ಗಡಿಪಾರು ನೋಟಿಸ್ ನೀಡಿದ್ದ ಎಸಿ ಯಾಕೆ ನಿಮ್ಮನ್ನು ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿದ್ದರು. ಡಿಸೆಂಬರ್ 7ನೇ ತಾರೀಖಿನಂದು ಸಹಾಯಕ ಆಯುಕ್ತರ ಗಡಿಪಾರು ನೋಟಿಸ್ಗೆ ಮಹೇಶ್ ಶೆಟ್ಟಿ ತಿಮರೋಡಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದ ತಿಮರೋಡಿ, ಗಡಿಪಾರು ನೋಟಿಸ್ ವಿರುದ್ಧ ವಾದ ಮಂಡಿಸಿದ್ದರು. ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಇದೀಗ ಮಹೇಶ್ ಶೆಟ್ಟಿ ತಿಮರೋಡಿಗೆ ಹಿನ್ನಡೆ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಮರೋಡಿಯನ್ನು ಏಕೆ ಗಡಿಪಾರು ಮಾಡಬೇಕು ಎಂಬುದಕ್ಕೆ ಸೂಕ್ತ ಕಾರಣ ನೀಡಿ ವರದಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸೌಜನ್ಯಾ ಪರ ಹೋರಾಟಗಾರನಿಗೆ ಮತ್ತೊಮ್ಮೆ ಈ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಸದನದಲ್ಲಿ ಪೇಚಿಗೆ ಸಿಲುಕಿದ ಲಕ್ಷ್ಮೀ ಹೆಬ್ಬಾಳ್ಳರ್ ಬೆಂಬಲಕ್ಕೆ ನಿಂತ ಡಿ.ಕೆ ಶಿವಕುಮಾರ್ : ಸಿಎಂ ಇಲಾಖೆ ಮೇಲೆ ಆರೋಪ
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಈ ಹಿಂದಿನ ಕೇಸುಗಳ ಜೊತೆಯಲ್ಲಿ ಹಾಲಿ ಕೇಸುಗಳನ್ನೂ ಸೇರಿಸಿ ಗಡಿಪಾರು ಮಾಡಲಾಗಿದೆ. ಕಳೆದ ಸೆಪ್ಟಂಬರ್ 18ರಂದು ಒಂದು ವರ್ಷದ ಅವಧಿಗೆ ಅನ್ವಯವಾಗುವಂತೆ ಎಸಿ ಸ್ಟೆಲ್ಲಾ ವರ್ಗೀಸ್ ಗಡಿಪಾರು ಆದೇಶ ನೀಡಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಿ ಆದೇಶ ಮಾಡಿದ್ದರು. ಆದರೆ ಈ ಗಡಿಪಾರು ಆದೇಶ ರದ್ದುಗೊಳಿಸುವಂತೆ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಎಸಿ ಆದೇಶ ರದ್ದುಗೊಳಿಸಿತ್ತು. ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ಸೂಚನೆ ನೀಡಿತ್ತು. ಇದರ ಅನ್ವಯ ಎಲ್ಲಾ ಬದಲಾವಣೆಗಳನ್ನು ಮಾಡಿ ಇದೀಗ ಮತ್ತೊಮ್ಮೆ ಅವರನ್ನು ಗಡಿಪಾರು ಮಾಡಲಾಗಿದೆ.



