SSLC ರಿಸಲ್ಟ್ ಮುಂದೂಡಿಕೆ ? ‘ಗ್ರೇಡಿಂಗ್’ ವಿವಾದ ಈಗ ಹೈಕೋರ್ಟ್ ಅಂಗಳಕ್ಕೆ: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
ಮೂರನೇ ಭಾಷೆಯ ಪರೀಕ್ಷೆಯಲ್ಲಿ ಅಂಕ ನೀಡುವ ಬದಲು 'ಗ್ರೇಡಿಂಗ್' ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದ ಸರ್ಕಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದೀಗ ಆತಂಕ ಶುರುವಾಗಿದೆ. ಪರೀಕ್ಷಾ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ನಡುವೆ ಕಾನೂನು ಸಮರ ಏರ್ಪಟ್ಟಿದೆ. ಮೂರನೇ ಭಾಷೆಯ ಪರೀಕ್ಷೆಯಲ್ಲಿ ಅಂಕ ನೀಡುವ ಬದಲು ‘ಗ್ರೇಡಿಂಗ್’ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದ ಸರ್ಕಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಹೈಕೋರ್ಟ್ ಮೆಟ್ಟಿಲೇರಿದ್ದು ಯಾರು ?
ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮೂವರು ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ಆರಂಭವಾದ ನಂತರ ಅಥವಾ ಪರೀಕ್ಷೆಯ ಮಧ್ಯದಲ್ಲಿ ಮೌಲ್ಯಮಾಪನ ನಿಯಮಗಳನ್ನು ಬದಲಿಸುವುದು (Change in the rules of the game midway) ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು. ಅಕ್ಟೋಬರ್ 28, 2025ರ ಸುತ್ತೋಲೆಯನ್ನು ಪಾಲಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಹೈಕೋರ್ಟ್ ತೀರ್ಪಿನಲ್ಲಿ ಏನಿದೆ ?
ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಏಪ್ರಿಲ್ 15ರಂದು ಮಹತ್ವದ ಆದೇಶ ನೀಡಿದೆ:
ಅಂಕಗಳೇ ಕಡ್ಡಾಯ: ಮೂರನೇ ಭಾಷೆಯ ಪತ್ರಿಕೆಗಳ ಮೌಲ್ಯಮಾಪನವನ್ನು ಅಂಕಗಳ (Marks) ಆಧಾರದ ಮೇಲೆ ಮಾಡಬೇಕು, ಗ್ರೇಡ್ ನೀಡಬಾರದು.
ನಿಯಮ ಬದಲಾವಣೆ ಬೇಡ: 2025-26ನೇ ಸಾಲಿನ ಪರೀಕ್ಷಾ ನೋಟಿಫಿಕೇಶನ್ ಹೊರಡಿಸಿದಾಗ ಯಾವ ನಿಯಮಗಳು ಜಾರಿಯಲ್ಲಿದ್ದವೋ, ಅದೇ ನಿಯಮಗಳ ಪ್ರಕಾರ ಮೌಲ್ಯಮಾಪನ ನಡೆಸಬೇಕು.
ಮಧ್ಯಂತರ ಬದಲಾವಣೆ ಅಸಾಧ್ಯ: ಪರೀಕ್ಷೆ ಮುಗಿದ ನಂತರ ಅಥವಾ ನಡೆಯುತ್ತಿರುವಾಗ ಮೌಲ್ಯಮಾಪನ ಕ್ರಮವನ್ನು ಬದಲಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.
ಸರಕಾರದ ಮುಂದಿನ ನಡೆ: ರಿವ್ಯೂ ಪಿಟಿಷನ್ !
ಹೈಕೋರ್ಟ್ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರುವ ಶಿಕ್ಷಣ ಇಲಾಖೆಯು ಈಗ ಪುನರ್ ಪರಿಶೀಲನಾ ಅರ್ಜಿ (Review Petition) ಸಲ್ಲಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶನಿವಾರ ಮಾತನಾಡಿ, “ಗ್ರೇಡಿಂಗ್ ವ್ಯವಸ್ಥೆಯ ಕುರಿತು ನಾವು ಹೈಕೋರ್ಟ್‌ನಲ್ಲಿ ರಿವ್ಯೂ ಪಿಟಿಷನ್ ಸಲ್ಲಿಸಿದ್ದೇವೆ. ಇದರ ವಿಚಾರಣೆ ಏಪ್ರಿಲ್ 21ರಂದು ನಡೆಯುವ ಸಾಧ್ಯತೆಯಿದೆ,” ಎಂದು ತಿಳಿಸಿದ್ದಾರೆ.
ಸರ್ಕಾರದ ಪ್ರಕಾರ, ರಾಷ್ಟ್ರೀಯ ವೃತ್ತಿಪರ ಶಿಕ್ಷಣ (NSQF) ಮತ್ತು ಹೊಸ ಮೌಲ್ಯಮಾಪನ ರಚನೆಯನ್ನು ಗಮನದಲ್ಲಿಟ್ಟುಕೊಂಡು ಗ್ರೇಡಿಂಗ್ ಜಾರಿಗೆ ತರಲು ಉದ್ದೇಶಿಸಲಾಗಿತ್ತು.
ಇದನ್ನೂ ಓದಿ: ತೃತೀಯ ಭಾಷೆಗೆ ಗ್ರೇಡಿಂಗ್ : ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಮುಂದೂಡಿಕೆ ಆಗುತ್ತಾ?
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿರುವ ದೊಡ್ಡ ಪ್ರಶ್ನೆ ಎಂದರೆ ಫಲಿತಾಂಶ ವಿಳಂಬವಾಗುತ್ತಾ ಎಂಬುದು.
ಫಲಿತಾಂಶ ಪ್ರಕಟಣೆಯಲ್ಲಿ ಯಾವುದೇ ಭಾರಿ ವಿಳಂಬವಾಗುವುದಿಲ್ಲ. ಒಂದು ಅಥವಾ ಎರಡು ದಿನ ವ್ಯತ್ಯಾಸವಾಗಬಹುದು ಅಷ್ಟೇ ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ ಮೊದಲು ಏಪ್ರಿಲ್ 24ರ ಸುಮಾರಿಗೆ ಫಲಿತಾಂಶ ಬರುವ ಸಾಧ್ಯತೆಯಿತ್ತು. ಆದರೆ ಈಗಿನ ಬೆಳವಣಿಗೆಯಿಂದಾಗಿ ಮೇ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ಸೂಚಿಸುತ್ತಿವೆ.
ಕರ್ನಾಟಕ ಸರಕಾರ’ಪ್ಲಾನ್ ಎ’ ಮತ್ತು ‘ಪ್ಲಾನ್ ಬಿ’ ಸಿದ್ಧಪಡಿಸಿಕೊಂಡಿರುವುದಾಗಿ ಹೇಳಿದೆ. ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ನಡೆಯುತ್ತಿರುವುದರಿಂದ, ಹೈಕೋರ್ಟ್‌ನ ಅಂತಿಮ ಆದೇಶದ ನಂತರವಷ್ಟೇ ರಿಸಲ್ಟ್ ಡೇಟ್ ಫಿಕ್ಸ್ ಆಗಲಿದೆ. ವಿದ್ಯಾರ್ಥಿಗಳು ಆತಂಕಪಡದೆ ಅಧಿಕೃತ ವೆಬ್‌ಸೈಟ್ (karresults.nic.in) ಗಮನಿಸುತ್ತಿರಲು ಸೂಚಿಸಲಾಗಿದೆ.



