ತೃತೀಯ ಭಾಷೆಗೆ ಗ್ರೇಡಿಂಗ್​ : ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ

SSLC ಪರೀಕ್ಷೆಯಲ್ಲಿ ತೃತೀಯ ಭಾಷೆಯ ಪರೀಕ್ಷೆಯನ್ನು ಗ್ರೇಡಿಂಗ್​ಗೆ ಸೀಮಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ. 2025-26ನೇ ಸಾಲಿನ ಪರೀಕ್ಷೆಯಿಂದಲೇ ಹಿಂದಿ ಭಾಷೆಯ ಅಂಕಗಳಿಗೆ ಕೊಕ್​ ನೀಡುವ ರಾಜ್ಯ ಶಿಕ್ಷಣ ಇಲಾಖೆಯ ತರಾತುರಿಯ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದ್ದು, ವಿದ್ಯಾರ್ಥಿಗಳಿಗೆ ಫೇಲಾಗುವ ಭೀತಿ ಎದುರಾಗಿದೆ.

ಪರೀಕ್ಷಾ ಸಂದರ್ಭದಲ್ಲಿ ಈ ರೀತಿಯ ಘೋಷಣೆ ಮಾಡಿದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತದೆ. ಆಗ ಅವರು ತೃತೀಯ ಭಾಷೆಯ ಪರೀಕ್ಷೆಗೆ ಮಹತ್ವದ ನೀಡುವುದಿಲ್ಲ ಎಂದು ಸಾಕಷ್ಟು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದರು. ಆದರೂ ರಾಜ್ಯ ಸರ್ಕಾರ ಹಿಂದಿ ಪರೀಕ್ಷೆಗೂ ಮೊದಲೇ ಈ ನಿರ್ಧಾರವನ್ನು ಘೋಷಿಸಿಬಿಟ್ಟಿತ್ತು. ಹಿಂದಿ ಭಾಷೆ ಸೇರಿದಂತೆ ವಿವಿಧ ತೃತೀಯ ಭಾಷೆಯ ಪರೀಕ್ಷೆಗೆ ಸಿದ್ಧರಾಗಿದ್ದ ವಿದ್ಯಾರ್ಥಿಗಳು, ಸರ್ಕಾರದ ಈ ಘೋಷಣೆ ಬಳಿಕ ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿ ಇದೀಗ ಕೆಲ ವಿದ್ಯಾರ್ಥಿಗಳಿಗೆ ಫೇಲಾಗುವ ಭೀತಿ ಎದುರಾಗಿದ್ದರೆ, 100ಕ್ಕೆ 100 ಫಲಿತಾಂಶ ದಾಖಲಿಸಬೇಕು ಎಂಬ ಕನಸು ಹೊಂದಿರುವ ವಿದ್ಯಾರ್ಥಿಗಳಿಗೂ ಸಂಕಷ್ಟ ಎದುರಾಗಿದೆ.

ಇನ್ನು ಹೈಕೋರ್ಟ್ ದ್ವಿಭಾಷಾ ನೀತಿ ಸೂತ್ರ ಜಾರಿಗೆ ತಡೆ ನೀಡುತ್ತಿದ್ದಂತೆಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನು ತಜ್ಞರ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೈಕೋರ್ಟ್ ಆದೇಶದ ಬಳಿಕ ತೀವ್ರ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದು ಯೋಗ್ಯವೇ ಅಥವಾ ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ನೀತಿ ಜಾರಿ ಮಾಡುವುದೇ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: 2026-27ನೇ ಸಾಲಿನ ಶಾಲೆಗಳ ರಜಾ ಅವಧಿ ವೇಳಾಪಟ್ಟಿ ಪ್ರಕಟ : ಮೇ 29ರಿಂದಲೇ ಸ್ಕೂಲ್​ ರೀ ಓಪನ್

ಶೈಕ್ಷಣಿಕವಾಗಿ ಯಾವುದೇ ನಿರ್ಧಾರವನ್ನು ಜಾರಿಗೆ ತರುವುದಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಘೋಷಿಸುವುದು ಉತ್ತಮ. ಹೀಗೆ ಪರೀಕ್ಷೆಗೆ 2 ದಿನ ಇರುವಾಗ ಘೋಷಣೆ ಮಾಡುವುದು ಸೂಕ್ತವಾದ ನಡೆಯಲ್ಲ . ಅಲ್ಲದೇ ಇಂತಹ ಯಾವುದೇ ನಿಯಮಾವಳಿಗಳ ಜಾರಿಯ ಮುನ್ನ ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಅಭಿಪ್ರಾಯ ಆಲಿಸುವುದೂ ಮುಖ್ಯ. ವರ್ಷಾಂತ್ಯದ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ತೃತೀಯ ಭಾಷೆಯ ಅಂಕ ಪರಿಗಣಿಸುವುದಿಲ್ಲ ಎಂದು ಘೋಷಿಸಿದ ರಾಜ್ಯ ಸರ್ಕಾರದ ನಡೆ ಸಮರ್ಥನೀಯವಲ್ಲ ಎಂಬುದು ಅನೇಕ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories