ಸೀಬರ್ಡ್‌ ಬಸ್‌ ದುರಂತ; ವಿಜಯ್‌ ಭಂಡಾರಿ ಸೇಫ್‌, ರಶ್ಮಿ ಗಾಗಿ ತೀವ್ರಗೊಂಡ ಹುಡುಕಾಟ

ಚಿತ್ರದುರ್ಗ: ಹಿರಿಯೂರು ಸಮೀಪದ ಗೋರ್ಲತ್ತು ಗ್ರಾಮದ ಹೆದ್ದಾರಿಯಲ್ಲಿ ಸಂಭವಿಸಿದ ಸೀ ಬರ್ಡ್ ಬಸ್ ದುರಂತದ (Chitradurga Seabird Sleeper Bus Accident) ಬಳಿಕ ಕಾಣೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪ್ರಯಾಣಿಕರ ಪೈಕಿ ಒಬ್ಬರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಮತ್ತೊಬ್ಬರ ಸುಳಿವು ಇನ್ನೂ ಸಿಗದ ಕಾರಣ ಆತಂಕ ಮುಂದುವರಿದಿದೆ.

ಸೇಫ್ ಆದ ವಿಜಯ್ ಭಂಡಾರಿ:
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಈ ದುರಂತ ಪೀಡಿತ ಬಸ್ಸಿನಲ್ಲಿ ಕುಮಟಾ ಮೂಲದ ವಿಜಯ್ ಭಂಡಾರಿ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿ 9U ಸೀಟು ಕಾಯ್ದಿರಿಸಿದ್ದ ವಿಜಯ್, ಅಪಘಾತದ ನಂತರ ಯಾರಿಗೂ ಸಂಪರ್ಕಕ್ಕೆ ಸಿಗದೆ ಆತಂಕ ಸೃಷ್ಟಿಯಾಗಿತ್ತು. ಆದರೆ, ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿಜಯ್ ಭಂಡಾರಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ತಮ್ಮ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ತೀವ್ರಗೊಂಡ ರಶ್ಮಿಗಾಗಿ ಹುಡುಕಾಟ:

ದುರದೃಷ್ಟವಶಾತ್, ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳ ತಾಲೂಕಿನ ಶಿರಾಲಿಯ ಸಾಫ್ಟ್‌ವೇರ್ ಇಂಜಿನಿಯರ್ ರಶ್ಮಿ ಅವರ ಪರಿಸ್ಥಿತಿ ಇನ್ನೂ ನಿಗೂಢವಾಗಿದೆ. ಅಪಘಾತ ಸಂಭವಿಸಿದ ಸಮಯದಿಂದಲೂ ರಶ್ಮಿ ಅವರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬದವರು ಮತ್ತು ಸಂಬಂಧಿಕರು ತೀವ್ರ ಆತಂಕದಲ್ಲಿದ್ದು, ಸ್ಥಳೀಯ ಆಸ್ಪತ್ರೆ ಹಾಗೂ ದುರಂತ ನಡೆದ ಜಾಗದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡದ ಈ 140 ಕೋಟಿಗೆ ಹಿಂದೆ ಮುಂದೆ ಯಾರೂ ಇಲ್ಲ! ಕರ್ನಾಟಕದ ಬ್ಯಾಂಕ್‌ಗಳಲ್ಲಿ ಕ್ಲೇಮ್‌ ಮಾಡದ ಹಣ 3,400 ಕೋಟಿ

ಘಟನೆಯ ಹಿನ್ನೆಲೆ:

ನಿನ್ನೆ ತಡರಾತ್ರಿ 1.30ರ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀ ಬರ್ಡ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿತ್ತು. ಈ ಭೀಕರ ದುರಂತದಲ್ಲಿ ಆರು ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಜಿಲ್ಲಾಡಳಿತವು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿದ್ದು, ರಶ್ಮಿ ಅವರ ಸುಳಿವಿಗಾಗಿ ತನಿಖೆ ತೀವ್ರಗೊಳಿಸಲಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories