ಸರ್ಕಾರಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ: 104 ಕೋಟಿ ವೆಚ್ಚದಲ್ಲಿ ಉಚಿತ ಶೂ-ಸಾಕ್ಸ್ ವಿತರಣೆ
Free Shoes and Socks to Government School Students: ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸುವ ಮಹತ್ವದ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯು ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಲಕ್ಷಾಂತರ ಮಕ್ಕಳಿಗೆ ಅನುಕೂಲವಾಗಲಿದ್ದು, ಶೈಕ್ಷಣಿಕವಾಗಿ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ‘ವಿದ್ಯಾ ವಿಕಾಸ’ ಯೋಜನೆಯ ಅಡಿಯಲ್ಲಿ ಈ ಕಾರ್ಯಕ್ರಮ ಜಾರಿಯಾಗುತ್ತಿದ್ದು, ಇದಕ್ಕಾಗಿ ಸರ್ಕಾರವು ಒಟ್ಟು 104.00 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವ್ಯಯಿಸಲಿದೆ. ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಉತ್ತಮ ಗುಣಮಟ್ಟದ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡಲಾಗುತ್ತದೆ.
ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಆರಂಭವಾದ ಮೇಲೆ ಶೂ-ಸಾಕ್ಸ್ ವಿತರಣೆಯಲ್ಲಿ ವಿಳಂಬವಾಗುವ ದೂರುಗಳು ಕೇಳಿಬರುತ್ತಿದ್ದವು. ಇದನ್ನು ತಪ್ಪಿಸಲು ಸರ್ಕಾರವು ಈ ಬಾರಿ ಮುಂಜಾಗ್ರತೆ ವಹಿಸಿದೆ. 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ, ಅಂದರೆ ಜೂನ್ ತಿಂಗಳ ವೇಳೆಗೆ ವಿದ್ಯಾರ್ಥಿಗಳ ಕೈಗೆ ಇವುಗಳನ್ನು ತಲುಪಿಸುವ ಉದ್ದೇಶದಿಂದ ಈಗಲೇ ಅನುಮೋದನೆ ನೀಡಲಾಗಿದೆ. ಸಂಪುಟದ ಒಪ್ಪಿಗೆ ಸಿಕ್ಕಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಿದೆ.
2011ಕ್ಕೂ ಮೊದಲು ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮ : ಬಡ್ತಿ ಬೇಕೆಂದರೆ ಈ ಅರ್ಹತೆ ಇರುವುದು ಕಡ್ಡಾಯ
ಈ ಬಾರಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯಾವುದೇ ಲೋಪವಾಗದಂತೆ ವಿತರಣಾ ಪ್ರಕ್ರಿಯೆಯನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕೇಳಿಬಂದಿದ್ದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನಿಗದಿತ ಸಮಯದಲ್ಲಿ ಗುಣಮಟ್ಟದ ಶೂಗಳನ್ನು ಮಕ್ಕಳಿಗೆ ತಲುಪಿಸುವ ಭರವಸೆ ನೀಡಿದೆ.



