ಊರಿಗೆ ಹೋಗ್ಲಿಕ್ಕೆ ಮನಸ್ಸುಂಟು, ಆದರೆ ಬಸ್ ರೇಟ್ ತಲೆ ತಿರುಗಿಸುತ್ತಾ ಉಂಟು’ : ದೀಪಾವಳಿಗೆ ಖಾಸಗಿ ಬಸ್ ಮಾಲೀಕರಿಂದ ಹಗಲು ದರೋಡೆ

diwali 2025 : ಬೆಂಗಳೂರು : ದುಡಿಮೆ, ವಿದ್ಯಾಭ್ಯಾಸಕ್ಕೆಂದು ದೂರದ ಊರುಗಳಲ್ಲಿ ನೆಲೆಸಿರುವ ಅನೇಕರಿಗೆ ಹಬ್ಬದ ಸಂದರ್ಭದಲ್ಲಿ ಮನೆಗೆ ಬರಬೇಕು, ಕಟುಂಬಸ್ಥರಿಗೆ ಉತ್ತಮ ಕ್ಷಣ ಕಳೆಯಬೇಕು ಎಂಬ ಆಸೆ ಇರುವುದು ಸಹಜ.
ಸದ್ಯ ದೀಪಾವಳಿ ಹಬ್ಬ ಬೇರೆ ಸಮೀಪಿಸುತ್ತಿದೆ. ಸಾಲು ಸಾಲು ರಜೆ, ಮನೆಯಲ್ಲಿ ಹಬ್ಬದ ಸಂಭ್ರಮ ಇದೆಲ್ಲವನ್ನು ನೆನೆಸಿಕೊಂಡು ಅನೇಕರು ಮನೆ ಕಡೆ ಹೊರಡುವ ಪ್ಲಾನ್ ಮಾಡಿದ್ದರೆ ಖಾಸಗಿ ಬಸ್ಗಳ ಟಿಕೆಟ್ ದರ ನೋಡಿ ತಮ್ಮ ನಿರ್ಧಾರವನ್ನೇ ಬದಲಿಸುತ್ತಿದ್ದಾರೆ.
ಸಿಕ್ಕಿದ್ದೇ ಛಾನ್ಸು ಅಂತಾ ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣದ ಟಿಕೆಟ್ ದರವನ್ನು ಮೂರು ಪಟ್ಟು ಜಾಸ್ತಿ ಮಾಡಿದ್ದು ಒಂದು ಬಾರಿ ಊರಿಗೆ ಹೋಗಿ ಬರಲು 6 ಸಾವಿರ ರೂಪಾಯಿಯಿದ್ದರೂ ಕಡಿಮೆ ಎಂಬಂತಾ ಸ್ಥಿತಿ ಎದುರಾಗಿದೆ.
ದೀಪಾವಳಿ ಹಬ್ಬದ ನೆಪದಲ್ಲಿ ಜನರನ್ನು ದಿವಾಳಿ ಮಾಡುವ ಪ್ಲಾನ್ಗೆ ಖಾಸಗಿ ಬಸ್ ಮಾಲೀಕರು ಬಂದಂತೆ ಕಾಣುತ್ತಿದೆ ಎಂದು ಜನರು ಮಾತನಾಡಿಕೊಳ್ಳುವಂತೆ ಆಗಿದೆ.
ಇದನ್ನೂ ಓದಿ : ಮಂಗಳೂರು : ಮಲಯಾಲಂ ಖ್ಯಾತ ನಟ ಜಯಕೃಷ್ಣನ್ ಅರೆಸ್ಟ್
ಸಾಮಾನ್ಯವಾಗಿ ಖಾಸಗಿ ಬಸ್ಗಳಲ್ಲಿ ಬೆಂಗಳೂರಿನಿಂದ ಉಡುಪಿಗೆ ಬರಲು 600 ರಿಂದ 950 ರೂಪಾಯಿಗಳವರೆಗೆ ಟಿಕೆಟ್ ದರವಿದೆ. ಆದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಟಿಕೆಟ್ ದರವನ್ನು 2500 ರೂಪಾಯಿಗಳಿಂದ 3500 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.
ಅದೇ ರೀತಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸಲು ಸಾಮಾನ್ಯ ದಿನಗಳಲ್ಲಿ 600 ರಿಂದ 900 ರೂಪಾಯಿಗಳು ಸಾಕು. ಆದರೆ ಹಬ್ಬದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಟಿಕೆಟ್ ದರವನ್ನು 2500ರಿಂದ 3500ಕ್ಕೆ ಏರಿಕೆ ಮಾಡಿದ್ದಾರೆ.
ವೀಕೆಂಡ್ ಹಾಗೂ ದೀಪಾವಳಿ ಹಬ್ಬದ ಸರಣಿ ರಜೆಗಳು ಒಟ್ಟೊಟ್ಟಾಗಿಯೇ ಬಂದಿರುವ ಹಿನ್ನೆಲೆಯಲ್ಲಿ ಜನ ಹೇಗಿದ್ದರೂ ಊರಿನ ಕಡೆ ಮುಖ ಮಾಡುತ್ತಾರೆ ಎಂದು ಖಾಸಗಿ ಬಸ್ ಮಾಲೀಕರು ಹಗಲು ದರೋಡೆಗೆ ಇಳಿದಿದ್ದಾರೆ.
ಇದನ್ನೂ ಓದಿ : ಮೂಡಬಿದಿರೆಯಲ್ಲಿ ವೇಶ್ಯಾವಾಟಿಕೆ ದಂಧೆ ಬಯಲು : ಆರೋಪಿಗಳ ಬಂಧನ, ಅಪ್ರಾಪ್ತೆಯ ರಕ್ಷಣೆ
ಕೇವಲ ಉಡುಪಿ. ಮಂಗಳೂರು ಮಾತ್ರವಲ್ಲ , ಬೆಂಗಳೂರಿನಿಂದ ಧಾರವಾಡ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಶಿರಸಿ ಹೀಗೆ ಎಲ್ಲಾ ಕಡೆ ತೆರಳುವ ಖಾಸಗಿ ಬಸ್ಗಳ ಟಿಕೆಟ್ ದರದ ಕತೆ ವ್ಯಥೆ ಎಂಬಂತಾಗಿದೆ.
ಹಬ್ಬದ ಸಂದರ್ಭದಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗಂತ ಮನಸ್ಸು ಬಂದ ದರವನ್ನು ನಿಗದಿ ಮಾಡುವುದು ಕೂಡ ತಪ್ಪೇ. ಈ ಬಗ್ಗೆ ಸರ್ಕಾರ ಗಮನಹರಿಸಿ ಖಾಸಗಿ ಬಸ್ಗಳ ಹಗಲು ದರೋಡೆಗೆ ಮೂಗು ದಾರ ಹಾಕಬೇಕಿದೆ.
diwali 2025 robbery by private bus owners on Deepavali



