ಪ್ರತಿದಿನ ಕೇವಲ 10–15 ನಿಮಿಷ ವ್ಯಾಯಾಮ ಮಾಡಿ: ಹೃದಯದ ಆರೋಗ್ಯದಲ್ಲಾಗುವ ಮ್ಯಾಜಿಕ್ ನೀವೇ ನೋಡಿ
Morning Exercise: ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ಮಾಡದೇ ಇರುವುದು ಸಾಮಾನ್ಯವಾಗಿದೆ. ನಿತ್ಯದ ಹಲವಾರು ಅವಶ್ಯಕತೆಗಳನ್ನು ಪೂರೈಸುವತ್ತ ಹೆಚ್ಚು ಗಮನಹರಿಸುವುದೇ ಇದಕ್ಕೆ ಕಾರಣ ಆಗಿರಲೂಬಹುದು.
ಆದರೆ ಆರೋಗ್ಯವೇ ಭಾಗ್ಯ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದೆಷ್ಟೇ ಹಣವಿದ್ದರೂ ರೋಗ ಬಂದರೆ ಕಷ್ಟಪಟ್ಟು ದುಡಿದ ಹಣ ಕ್ಷಣಾರ್ಧದಲ್ಲಿ ಖರ್ಚಾಗಿಬಿಡುತ್ತದೆ.
ಹಾಗಾಗಿ ಪ್ರತಿನಿತ್ಯ ಸ್ವಲ್ಪ ಸಮಯ ಆರೋಗ್ಯದ ಕಡೆಗೆ ಗಮನಹರಿಸುವುದು ಬಹಳ ಮುಖ್ಯವಾಗಿದೆ. ಕೇವಲ 10 ರಿಂದ 15 ನಿಮಿಷಗಳ ಕಾಲ ಮಾಡುವ ವ್ಯಾಯಾಮಗಳು ಅದ್ಭುತ ಪ್ರಯೋಜನಗಳನ್ನು ತಂದುಕೊಡುತ್ತವೆ. ಹೃದಯ ಆರೋಗ್ಯದಿಂದಿದ್ದರೆ ದೇಹ ಚೈತನ್ಯದಿಂದಿರುತ್ತದೆ.
ನೀವು ಪ್ರತಿದಿನ ಮಾಡುವ ಚಿಕ್ಕ ಸಮಯದ ವ್ಯಾಯಾಮ ನಿಮಗೆ ದೀರ್ಘಾವಧಿಯ ಆರೋಗ್ಯ ನೀಡಬಲ್ಲದು. ಪ್ರತಿದಿನ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮಗಳನ್ನು ಮಾಡಿ. ಅದರಿಂದ ನಿಮಗೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.
ರಕ್ತದೊತ್ತಡ ನಿಯಂತ್ರಣದಲ್ಲಿಡಲು
ಪ್ರತಿದಿನ ಲಘು ಕಾರ್ಡಿಯೋ ವ್ಯಾಯಾಮ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯ. ಮತ್ತು ಈ ವ್ಯಾಯಾಮ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಕೊಲೆಸ್ಟ್ರಾಲ್ ಸರಿದೂಗಿಸಲು
ವ್ಯಾಯಾಮವು ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ. ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಮಹಿಳೆಯರೇ! ಈ 8 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ: ವಿಟಮಿನ್ ಡಿ ಕೊರತೆ ನಿಮ್ಮನ್ನು ಕಾಡುತ್ತಿರಬಹುದು
ರಕ್ತ ಪರಿಚಲನೆ ಸುಧಾರಿಸುತ್ತದೆ
ಪ್ರತಿದಿನ ತಪ್ಪದೇ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತದ ಹರಿವು ಸರಾಗವಾಗಿರುತ್ತದೆ. ಇದರಿಂದಾಗಿ ಹೃದಯವು ಹೆಚ್ಚು ಕಷ್ಟಪಟ್ಟ ಕೆಲಸ ಮಾಡಬೇಕಾಗಿಲ್ಲ.
ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ
ಹೃದಯದ ಸ್ನಾಯುಗಳನ್ನು ಬಲಪಡಿಸುವ ಕಾರ್ಯವನ್ನು ವ್ಯಾಯಾಮಗಳು ಮಾಡುತ್ತವೆ. ಜೊತೆಗೆ ಹೃದಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ
ಬೆಳಗಿನ ವ್ಯಾಯಾಮವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಬೊಜ್ಜು ಸಂಬಂಧಿತ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ನಿಯಮಿತವಾಗಿ ಮಾಡುವ ದೈಹಿಕ ಚಟುವಟಿಕೆಯು ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಒತ್ತಡ ಮತ್ತು ಆತಂಕ ನಿವಾರಿಸುತ್ತದೆ
ಬೆಳಗಿನ ವ್ಯಾಯಾಮವು ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ವಿಶ್ರಾಂತಿ ನೀಡುತ್ತದೆ.
ಹೃದಯದ ಬಡಿತ ಸುಧಾರಿಸುತ್ತದೆ
ನಿಯಮಿತ ವ್ಯಾಯಾಮವು ಹೃದಯ ಬಡಿತವನ್ನು ಸಮತೋಲನದಲ್ಲಿಡುವಂತೆ ಮಾಡುತ್ತದೆ. ಕ್ರಮಬದ್ಧವಾದ ಹೃದಯದ ಬಡಿತವು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ.
ಉತ್ತಮ ನಿದ್ರೆ
ಒಳ್ಳೆಯ ನಿದ್ರೆ ಹೃದಯಕ್ಕೆ ವಿಶ್ರಾಂತಿ ನೀಡುತ್ತದೆ. ಆಗ ಹೃದಯ ಕೋಶಗಳನ್ನು ಸರಿಪಡಿಸಿಕೊಳ್ಳಲು ಸಹಾಯವಾಗುತ್ತದೆ. ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಾಗೂ ಹೃದಯ ಎರಡಕ್ಕೂ ವಿಶ್ರಾಂತಿ ದೊರಕುತ್ತದೆ.
ಇದನ್ನೂ ಓದಿ: ಕೇವಲ 100 ರೂಪಾಯಿಗಳಲ್ಲಿ ಸುಲಭವಾಗಿ ಸಿಗಬಲ್ಲ ಪ್ರೊಟೀನ್ ಮೂಲಗಳ ಬಗ್ಗೆ ಇಲ್ಲಿದೆ ಮಾಹಿತಿ
ಹೃದಯಕ್ಕೆ ರಕ್ಷಣೆ ಒದಗಿಸುತ್ತದೆ
ನಿಯಮಿತವಾಗಿ ವ್ಯಾಯಾಮ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು 40-50% ರಷ್ಟು ಕಡಿಮೆಯಾಗುತ್ತದೆ.
ಕೇವಲ 10 ರಿಂದ 15 ನಿಮಿಷಗಳ ಕಾಲ ಮಾಡುವ ವ್ಯಾಯಾಮದಿಂದ ನಿಮ್ಮ ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.
ಆದ್ದರಿಂದ ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಕೇವಲ 10-15 ನಿಮಿಷಗಳನ್ನು ತೆಗೆದುಕೊಂಡು ವ್ಯಾಯಾಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ನಿಮ್ಮ ಹೃದಯವನ್ನು ಜೋಪಾನವಾಗಿ ಕಾಯ್ದುಕೊಳ್ಳಿ.



