ಮನೆಯ ಯಾವ ದಿಕ್ಕಿಗೆ ಪೂರ್ವಜರ ಫೋಟೋ ಹಾಕುವುದರಿಂದ ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ತುಂಬಿರುತ್ತದೆ?
Vastu Tips for Ancestors Photo: ವಾಸ್ತು ಶಾಸ್ತ್ರವನ್ನು ಗೌರವಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎನ್ನಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಹೇಳಲಾದ ನಿಯಮಗಳನ್ನು ಪಾಲನೆ ಮಾಡುವುದರಿಂದ ನಕಾರಾತ್ಮಕ ಅಂಶಗಳೂ ದೂರವಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಚಿಕ್ಕ ಚಿಕ್ಕ ವಿಷಯಗಳನ್ನೂ ಕೂಡಾ ಗಮನದಲ್ಲಿರಿಸಿಕೊಂಡು ಅದಕ್ಕೆ ನಿಯಮ, ದಿಕ್ಕುಗಳನ್ನು ಹೇಳಲಾಗಿದೆ. ಮನೆ ಅಡಿಪಾಯ ಹಾಕುವುದರಿಂದ ಹಿಡಿದು ಬಣ್ಣ, ಅಲಂಕಾರಿಕ ವಸ್ತುಗಳನ್ನು ಜೋಡಿಸುವುದರವರೆಗೆ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಅದೇ ರೀತಿ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು ಹಾಕಲೂ ಸಹ ನಿಯಮಗಳನ್ನು ಹೇಳಲಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ಪೂರ್ವಜರಿಗೆ ಅಸಮಾಧಾನವಾದರೆ ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಪಿತೃ ದೋಷಕ್ಕೂ ಕಾರಣವಾಗುತ್ತದೆ. ಹಾಗಾಗಿ ಪಿತೃಗಳನ್ನು ಸಂತೋಷ ಪಡಿಸಲು ಕೆಲವೊಂದಿಷ್ಟು ಕೆಲಸಗಳನ್ನು ಮಾಡಲಾಗುತ್ತದೆ.
ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ತಪ್ಪುಗಳು ದೊಡ್ಡ ನಷ್ಟವನ್ನೇ ಎದುರಿಸುವಂತೆ ಮಾಡುತ್ತದೆ. ಸಾಮಾನ್ಯವಾಗಿ ಮನೆಯ ಹಿರಿಯರ ಫೋಟೋಗಳನ್ನು ಅವರ ನೆನಪಿಗೋಸ್ಕರ ಮನೆಯಲ್ಲಿ ತೂಗುಹಾಕಲಾಗುತ್ತದೆ.
ಆದರೆ ಅದನ್ನು ಮನಸ್ಸಿಗೆ ಬಂದಲ್ಲಿ ಹಾಕಲಾಗುತ್ತದೆ. ವಾಸ್ತು ಇದನ್ನು ತಪ್ಪು ಎಂದು ಹೇಳುತ್ತದೆ. ಪೂರ್ವಜರ ಫೋಟೋಗಳನ್ನು ಸರಿಯಾದ ದಿಕ್ಕಿನಲ್ಲಿ ಅಳವಡಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಪೂರ್ವಜರ ಫೋಟೋಗಳನ್ನು ಇಡುವುದರಿಂದ ಜೀವನದಲ್ಲಿ ಸುಖ ಶಾಂತಿ ತುಂಬಿರುತ್ತದೆ ಎಂದು ತಿಳಿಯೋಣ.
ಪೂರ್ವಜರ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂರ್ವಜರ ಫೋಟೋಗಳನ್ನು ಇಡಲು ದಕ್ಷಿಣ ದಿಕ್ಕನ್ನು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಫೋಟೋ ಹಾಕುವುದರಿಂದ ಅವರಿಗೆ ಸಂತೋಷವಾಗುತ್ತದೆ.
ಇದರಿಂದ ಕುಟುಂಬದ ಸದಸ್ಯರಿಗೆ ಅವರ ಆಶೀರ್ವಾದ ದೊರಕುತ್ತದೆ. ಇದು ಮನೆಗೆ ಶಾಂತಿಯನ್ನು ಹಾಗೂ ಸಮೃದ್ಧಿಯನ್ನು ತರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರು ಜೀವನದಲ್ಲಿರುವ ಅನೇಕ ಕ್ಲಿಷ್ಟಕರ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.
ಈ ತಪ್ಪನ್ನಂತೂ ಮಾಡಲೇಬೇಡಿ
ಪೂರ್ವಜರ ಫೋಟೋಗಳನ್ನು ಗೋಡೆಯ ಮೇಲೆ ನೇತುಹಾಕುವಂತಹ ತಪ್ಪನ್ನು ಎಂದಿಗೂ ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ. ಹಾಗೆ ಮಾಡುವುದರಿಂದ ಮನೆಯ ಸದಸ್ಯರಿಗೆ ವಾಸ್ತು ದೋಷ ಅಥವ ಸಮಸ್ಯೆ ಉಂಟಾಗಬಹುದು.
ಆದ್ದರಿಂದ ಪೂರ್ವಜರ ಫೋಟೋಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಿದ ದಿಕ್ಕಿನಲ್ಲಿ ಒಂದು ಟೇಬಲ್ ಅಥವಾ ಶೋ ಕೇಸ್ನಂತೆಯೇ ಪ್ರತ್ಯೇಕ ಜಾಗದಲ್ಲಿಡಿ.
ಪೂರ್ವಜರ ಫೋಟೋಗಳನ್ನು ಎಲ್ಲಿ ಇಡಬಾರದು?
ವಾಸ್ತು ಶಾಸ್ತ್ರದ ಸಲಹೆಗಳ ಪ್ರಕಾರ ಮಲಗುವ ಕೋಣೆಯಲ್ಲಿ ಪೂರ್ವಜರ ಚಿತ್ರಗಳನ್ನು ಇಡಬಾರದು. ಏಕೆಂದರೆ ಮಲಗುವ ಕೋಣೆಯಲ್ಲಿ ಪೂರ್ವಜರ ಫೋಟೋ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಘರ್ಷಣೆಗೆ ಕಾರಣವಾಗಬಹುದು. ನಕಾರಾತ್ಮಕ ಶಕ್ತಿ ಹೆಚ್ಚಾಗಿ ಆರ್ಥಿಕ ತೊಂದರೆಗಳು ಉಂಟಾಗಬಹುದು.
ಇದನ್ನೂ ಓದಿ: ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಬೆಸ್ಟ್ ಫ್ರೆಂಡ್ ಜೊತೆ ಜಗಳವಾಡಿದಂತೆ ಕಂಡುಬಂದರೆ ಅದರ ಅರ್ಥ ಏನು ಗೊತ್ತಾ?
ಈ ವಿಷಯಗಳನ್ನು ನೆನಪಿನಲ್ಲಿಡಿ
ಪೂರ್ವಜರ ಚಿತ್ರಗಳ ಸುತ್ತಲೂ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕು. ಇದರಿಂದ ಪೂರ್ವಜರು ಸಂತೋಷಗೊಂಡು ಆಶೀರ್ವದಿಸುತ್ತಾರೆ.
ಜೀವಂತ ಜನರ ಫೋಟೋಗಳನ್ನು ಪೂರ್ವಜರ ಫೋಟೋಗಳ ಪಕ್ಕದಲ್ಲಿ ಎಂದಿಗೂ ಇಡಬಾರದು. ಅಂತಹ ತಪ್ಪು ಜೀವಂತ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.



