ಧರ್ಮಸ್ಥಳ ಬುರುಡೆ ಪ್ರಕರಣ : ಕೊನೆಗೂ ಶಿವಮೊಗ್ಗ ಜೈಲಿನಿಂದ ಹೊರಬಂದ ಚಿನ್ನಯ್ಯ..!
ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ರೂವಾರಿ ಮಾಜಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಹೊರಬರುವ ಭಾಗ್ಯ ಒದಗಿಬಂದಿದೆ. ಜಾಮೀನಿಗೆ 1 ಲಕ್ಷ ರೂಪಾಯಿ ಷರತ್ತು ಪೂರೈಸಿ ದಾಖಲೆ ನೀಡಿದ ಚಿನ್ನಯ್ಯ ಕಡೆಯವರು ಚಿನ್ನಯ್ಯರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜೈಲಿಗೆ ಬಂದಿದ್ದ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ರತ್ನಾ ಮತ್ತು ವಕೀಲರ ಜೊತೆಯಲ್ಲಿ ಚಿನ್ನಯ್ಯ ಜೈಲಿನಿಂದ ಹೊರ ನಡೆದಿದ್ದಾರೆ.
ಅಂದಹಾಗೆ ಈ ಪ್ರಕರಣದಲ್ಲಿ ಚಿನ್ನಯ್ಯಗೆ ಎಂದೋ ಜಾಮೀನು ದೊರಕಿತ್ತು. ಆದರೆ 1 ಲಕ್ಷ ರೂಪಾಯಿ ಬಾಂಡ್ ಕಟ್ಟಲು ಸಾಧ್ಯವಾಗದೇ ಚಿನ್ನಯ್ಯ ಪರಿತಪಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರಿಗೆ 1 ಲಕ್ಷ ರೂಪಾಯಿ ಷರತ್ತು ಬದ್ಧ ಜಾಮೀನು ಪ್ರಕ್ರಿಯೆ ಪೂರೈಕೆ ಮಾಡಲಾಗಿದೆ. ಹೀಗಾಗಿ ಚಿನ್ನಯ್ಯಗೆ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ.
ಇಷ್ಟು ದಿನಗಳ ಕಾಲ ಜಾಮೀನು ದೊರಕಿದ್ದರೂ ಬುರುಡೆ ಚಿನ್ನಯ್ಯ ಜೈಲಿನಲ್ಲಿಯೇ ಉಳಿದಿದ್ದರು. ಸೆಪ್ಟೆಂಬರ್ 9ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಚಿನ್ನಯ್ಯರನ್ನು ಶಿಫ್ಟ್ ಮಾಡಲಾಗಿತ್ತು. ಕಾವೇರಿ ಬ್ಯಾರಕ್ನಲ್ಲಿ ಚಿನ್ನಯ್ಯನನ್ನು ಇರಿಸಲಾಗಿತ್ತು. ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ವಿಚಾರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳ್ತಂಗಡಿಯಿಂದ ಶಿವಮೊಗ್ಗ ಜೈಲಿಗೆ ಆರೋಪಿ ಚಿನ್ನಯ್ಯನನ್ನು ಶಿಫ್ಟ್ ಮಾಡಲಾಗಿತ್ತು.
ಇದನ್ನೂ ಓದಿ: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆಗಡಿಪಾರು ಸಂಕಷ್ಟ!
ಜೈಲಿನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಚಿನ್ನಯ್ಯ ಹಾಗೂ ಪತ್ನಿ ಮಲ್ಲಿಕಾ ನಿರಾಕರಿಸಿದ್ದಾರೆ. ಕಾರಿನಲ್ಲಿ ಕುಳಿತ ಚಿನ್ನಯ್ಯ ಗ್ಲಾಸು ಏರಿಸಿಕೊಂಡು ಸೀದಾ ತೆರಳಿದ್ದಾರೆ.



