ಅಮುಲ್ ಮೊಸರಿನಲ್ಲಿ ಹುಳ : ಐಆರ್‌ಸಿಟಿಸಿ ಜೊತೆ ಒಪ್ಪಂದ ರದ್ದು

ವಂದೇ ಭಾರತ್​ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಅಮುಲ್​ ಮೊಸರಿನಲ್ಲಿ ಹುಳ ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ಅಮುಲ್​ ಸಂಸ್ಥೆ ತಲೆತಗ್ಗಿಸುವಂತಾಗಿದೆ.

ನವದೆಹಲಿ : ಐಆರ್​ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅಮುಲ್​ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆಯ ಪ್ರೀಮಿಯಂ ರೈಲುಗಳಿಗೆ ಡೈರಿ ಉತ್ಪನ್ನಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಆದರೆ ವಂದೇ ಭಾರತ್​ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಅಮುಲ್​ ಮೊಸರಿನಲ್ಲಿ ಹುಳ ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ಅಮುಲ್​ ಸಂಸ್ಥೆ ತಲೆತಗ್ಗಿಸುವಂತಾಗಿದೆ. ಪಾಟ್ನಾದಿಂದ ಟಾಟಾನಗರಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಈ ಘಟನೆಯು ವರದಿಯಾಗಿದೆ. ಈ ಸಂಬಂಧ ದೇಶದ ಪ್ರತಿಷ್ಠಿತ ಡೈರಿ ಉತ್ಪನ್ನಗಳ ಸಂಸ್ಥೆಯಾದ ಅಮುಲ್​ಗೆ ಸಮನ್ಸ್​ ಜಾರಿ ಮಾಡಲಾಗಿದೆ.

ಅಂದಹಾಗೆ ಇದು ಮಾರ್ಚ್ 15ರಂದು ನಡೆದ ಘಟನೆಯಾಗಿದ್ದು, ವಂದೇಭಾರತ್​ ರೈಲಿನಲ್ಲಿ ರಿತೇಶ್​ ಸಿಂಗ್​ ತಮ್ಮ ಆರು ಮಂದಿ ಸಹಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದರು. ಈ ಏಳು ಪ್ರಯಾಣಿಕರಿಗೆ ರೈಲಿನಲ್ಲಿ ದೊರೆತ ಊಟದಲ್ಲಿದ್ದ ಮೊಸರಿನಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಸಂಬಂಧ ರಿತೇಶ್​ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ನಿನ್ನೆ ಅಮುಲ್​ ಸಂಸ್ಥೆಗೆ ಸಮನ್ಸ್​ ಜಾರಿ ಮಾಡಲಾಗಿದೆ.

ರೈಲ್ವೆ ಸಚಿವಾಲಯವು ಈ ಪ್ರಕರಣ ಸಂಬಂಧ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಹಾಗೂ ಕೃಷ್ಣ ಎಂಟರ್​ಪ್ರೈಸಸ್​ಗೂ ಭಾರೀ ಮೊತ್ತದ ದಂಡ ವಿಧಿಸಿದೆ. ಅಲ್ಲದೇ ಅಮುಲ್​ ಸಂಸ್ಥೆಯೊಂದಿಗಿನ ಒಡಂಬಡಿಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿರುವ ಭಾರತೀಯ ರೈಲ್ವೆ ಇಲಾಖೆಯು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.

ಇದನ್ನೂ ಓದಿ: ಗ್ರಾಹಕರಿಗೆ ಇಲ್ಲ ‘ಗ್ಯಾಸ್​ ಟ್ರಬಲ್​’ : ಹೋಟೆಲ್ ಮಾಲೀಕರಿಗೆ ಕೇಂದ್ರದಿಂದ ಖಡಕ್ ಆದೇಶ – ತಪ್ಪಿದರೆ ಬೀಳುತ್ತೆ ಭಾರಿ ದಂಡ!

ಆದರೆ ಈ ಘಟನೆ ಸಂಬಂಧ ಅಮುಲ್​ ಸಂಸ್ಥೆಯಾಗಲಿ ಅಥವಾ ಐಆರ್​ಸಿಟಿಸಿಯಾಗಲಿ ಯಾವುದೇ ಬಹಿರಂಗ ಹೇಳಿಕೆ ಅಥವಾ ಕ್ಷಮೆಯಾಚನೆ ಮಾಡಿಲ್ಲ. ಅಲ್ಲದೇ ಈ ಘಟನೆಯನ್ನು ಅಮುಲ್​ ಯಾವ ರೀತಿ ಸಮರ್ಥಿಸಿಕೊಂಡಿದೆ ಎಂಬುದರ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಲು ಐಆರ್​ಸಿಟಿಸಿ ನಿರಾಕರಿಸಿದೆ ಎನ್ನಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories