ಉಡುಪಿ: ಗಾಯಗೊಂಡ ಕಾಡುಬೆಕ್ಕಿನ ರಕ್ಷಣೆ, ಸಮಾಜಸೇವಕನ ಮಾನವೀಯತೆ

ಕಾಡುಜೀವಿಗಳು ನಾಡಿಗೆ ಬಂದಾಗ ಅಥವಾ ಸಂಕಷ್ಟಕ್ಕೆ ಸಿಲುಕಿದಾಗ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಿದರೆ ಅವುಗಳ ಪ್ರಾಣ ಉಳಿಸಲು ಸಾಧ್ಯ.

ಉಡುಪಿ : ಪ್ರಾಣಿ ಸಂಕುಲದ ರಕ್ಷಣೆಯಲ್ಲಿ ಸಾರ್ವಜನಿಕರ ಜಾಗೃತಿ ಎಷ್ಟು ಮುಖ್ಯ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅಪರೂಪದ ಕಾಡುಬೆಕ್ಕನ್ನು ರಕ್ಷಿಸಿ, ಅದಕ್ಕೆ ಮರುಜೀವ ನೀಡುವಲ್ಲಿ ಸಮಾಜಸೇವಕರು ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಾಳೆಕಟ್ಟೆ ಸಮೀಪ ಕಾಡುಬೆಕ್ಕೊಂದು ಬೀದಿ ನಾಯಿಗಳ ಗುಂಪಿನ ದಾಳಿಗೆ ಸಿಲುಕಿತ್ತು. ನಾಯಿಗಳ ಕಚ್ಚಾಟದಿಂದಾಗಿ ಬೆಕ್ಕು ಗಂಭೀರವಾಗಿ ಗಾಯಗೊಂಡು ರಸ್ತೆಯ ಪಕ್ಕದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ರವಿ ಅವರು ತಕ್ಷಣವೇ ಪ್ರಸಿದ್ಧ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು: ದಾರಿ ತಪ್ಪಿದ್ದ ಬುದ್ಧಿಮಾಂದ್ಯ ಬಾಲಕ 12 ಗಂಟೆಯಲ್ಲಿ ಪೋಷಕರ ವಶಕ್ಕೆ

ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ನಿತ್ಯಾನಂದ ಒಳಕಾಡುವರು, ಗಾಯಾಳು ಕಾಡುಬೆಕ್ಕನ್ನು ಜಾಗರೂಕತೆಯಿಂದ ರಕ್ಷಿಸಿದರು. ಬಳಿಕ ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕರನ್ನು ಸಂಪರ್ಕಿಸಿ ಪ್ರಾಣಿಯನ್ನು ಅವರಿಗೆ ಹಸ್ತಾಂತರಿಸಿದರು.

ಅರಣ್ಯ ಇಲಾಖೆಯಿಂದ ಚಿಕಿತ್ಸೆ ಮತ್ತು ಬಿಡುಗಡೆ

ಅರಣ್ಯ ಇಲಾಖೆಯ ಸಿಬ್ಬಂದಿಗಳು ತಕ್ಷಣವೇ ಕಾಡುಬೆಕ್ಕನ್ನು ಪಶುವೈದ್ಯರ ಬಳಿ ಕೊಂಡೊಯ್ದು ಅಗತ್ಯ ಚಿಕಿತ್ಸೆ ಕೊಡಿಸಿದರು. ಕೆಲ ದಿನಗಳ ಕಾಲ ಇಲಾಖೆಯ ನಿಗಾದಲ್ಲಿದ್ದ ಬೆಕ್ಕು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಇದನ್ನೂ ಓದಿ : ಗ್ಯಾಸ್ ಬಿಲ್ ಅಪ್‌ಡೇಟ್ ಹೆಸರಲ್ಲಿ ಉಡುಪಿ ಮಹಿಳೆಗೆ ₹1.45 ಲಕ್ಷ ನಾಮ ! ಇಪಿಎಸ್‌ (APK) ಲಿಂಕ್ ಬಗ್ಗೆ ಇರಲಿ ಎಚ್ಚರ

ಅಧಿಕಾರಿಗಳ ಮನವಿ: “ಕಾಡುಜೀವಿಗಳು ನಾಡಿಗೆ ಬಂದಾಗ ಅಥವಾ ಸಂಕಷ್ಟಕ್ಕೆ ಸಿಲುಕಿದಾಗ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಿದರೆ ಅವುಗಳ ಪ್ರಾಣ ಉಳಿಸಲು ಸಾಧ್ಯ. ಉಡುಪಿಯ ಈ ಘಟನೆಯಲ್ಲಿ ಸಾರ್ವಜನಿಕರ ಸಮಯಪ್ರಜ್ಞೆ ಮೆಚ್ಚುವಂತದ್ದು,” ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 

forest department treatment

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories